

ಬೆಂಗಳೂರು: ಕರೊನಾ ತಡೆಗೆ ಸಾಕಷ್ಟು ಮುಂಜಾಗ್ರತೆ ವಹಿಸುತ್ತಿರುವ ನಡುವೆಯೂ ರಾಜ್ಯದಲ್ಲಿ ಮಹಾಮಾರಿ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಶನಿವಾರ ಒಂದೇ ದಿನ ಐವರಲ್ಲಿ ಸೋಂಕು ದೃಢಪಟ್ಟಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಮೂವರು, ಮೈಸೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರು ಸೇರಿ 5 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸೋಂಕಿತ ವ್ಯಕ್ತಿ ಗುಣಮುಖರಾಗಿ ಶುಕ್ರವಾರ ಮನೆಗೆ ತೆರಳಿದ್ದು, ಇನ್ನೂ ನಾಲ್ವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ವಿಷಯ ಕೊಂಚ ನಿರಾಳತೆ ಮೂಡಿದ ಬೆನ್ನಲ್ಲೇ ಐವರಲ್ಲಿ ಸೋಂಕು ದೃಢಪಟ್ಟಿರುವುದು ಭೀತಿ ಸೃಷ್ಟಿಸಿದೆ.
39 ವರ್ಷದ ವ್ಯಕ್ತಿ ನೆದರ್ಲ್ಯಾಂಡ್ನ ಆಮ್ೆರ್ಡ್ಯಾಮ್ಂದ ಮಾ. 19ರಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಈತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈತನ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದ 53 ವರ್ಷದ ಮಹಿಳೆಗೂ ಸೋಂಕು ಹರಡಿದೆ. ಮತ್ತೊಂದು ಪ್ರಕರಣದಲ್ಲಿ 21 ವರ್ಷದ ಯುವಕ ಈಡನ್ಬರ್ಗ್ ಸ್ಕಾಟ್ಲೆಂಡ್ನಿಂದ ಮಾ.17ರಂದು ಬೆಂಗಳೂರಿಗೆ ಬಂದಿದ್ದು, ಈತನಿಗೂ ಸೋಂಕು ತಗುಲಿದೆ. ಈ ಮೂವರನ್ನು ನಿಯೋಜಿತ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್ನಲ್ಲಿರಿಸಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚಿಕ್ಕಬಳ್ಳಾಪುರದ 31 ವರ್ಷದ ವ್ಯಕ್ತಿ ಸೌದಿ ಅರೇಬಿಯಾದ ಮೆಕ್ಕಾ ಪ್ರವಾಸದಿಂದ ಮಾ.14ರಂದು ವಾಪಸ್ಸಾಗಿದ್ದು, ಇವರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಮೈಸೂರು ನಿವಾಸಿ 35 ವರ್ಷದ ವ್ಯಕ್ತಿ ದುಬೈನಿಂದ ಗೋವಾ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಇವರಿಗೂ ಸಹ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ನದಲ್ಲಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೋಂಕು ಪರೀಕ್ಷೆ ಮಾನದಂಡ ಪರಿಷ್ಕರಣೆ: ಕರೊನಾ ವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸೋಂಕು 3ನೇ ಹಂತಕ್ಕೆ (ಇಡೀ ಸಮುದಾಯಕ್ಕೆ ಹರಡುವುದು) ತಲುಪುವುದನ್ನು ತಡೆಯಲು ಸೋಂಕು ಪರೀಕ್ಷೆ ಮಾನದಂಡಗಳನ್ನು ಪರಿಷ್ಕರಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಈವರೆಗೆ ಕೇವಲ ವಿದೇಶದಿಂದ ಬಂದಿರುವ ಹಾಗೂ ರೋಗ ಲಕ್ಷಣಗಳಿರುವ ಮತ್ತು ಸೋಂಕಿತ ವ್ಯಕ್ತಿಯ ಜತೆ ಸಂಪರ್ಕ ಹೊಂದಿದ್ದವರಿಗೆ ಮಾತ್ರ ಪರೀಕ್ಷೆ ಮಾಡಲಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಸೋಂಕು ಸಮುದಾಯಕ್ಕೆ ಹರಡುವುದನ್ನು ತಡೆಯಲು ಈ ಮೊದಲಿದ್ದ ನಿಯಮಗಳನ್ನು ಪರಿಷ್ಕರಿಸಲಾಗಿದೆ. ಅದರಂತೆ ಇನ್ನು ಮುಂದೆ ರೋಗ ಲಕ್ಷಣ ಹೊಂದಿರುವ ಪ್ರತಿ ವ್ಯಕ್ತಿ, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಆಸ್ಪತ್ರೆಗಳಲ್ಲಿ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ದಾಖಲಾಗಿರುವವರು, ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಸೋಂಕಿತರಿಗೆ ಚಿಕಿತ್ಸೆ ನೀಡಿರುವವರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು. ಈವರೆಗೂ ಸೋಂಕಿತ ದೇಶಗಳಿಂದ ಆಗಮಿಸಿರುವ ವ್ಯಕ್ತಿಗಳಿಗೆ ಹಾಗೂ ಅವರೊಂದಿಗೆ ಪ್ರಥಮ ಸಂಪರ್ಕ ಹೊಂದಿದ ಸ್ಥಳೀಯರಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. ಅದು ಇಡೀ ಸಮುದಾಯಕ್ಕೆ ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಯಾರಿಗೆ ಹೇಗೆ ಪರೀಕ್ಷೆ
ಕಳೆದ 14 ದಿನಗಳಲ್ಲಿ ವಿದೇಶದಿಂದ ಆಗಮಿಸಿರುವ ಎಲ್ಲ ನಾಗರಿಕರು 14 ದಿನ ಮನೆಯಲ್ಲೇ ಪ್ರತ್ಯೇಕವಾಗಿರಬೇಕು. ಸೋಂಕು ದೃಢಪಟ್ಟ ವ್ಯಕ್ತಿಯ ಜತೆ ವಾಸಿಸುತ್ತಿದ್ದ ಕುಟುಂಬ ಎಲ್ಲ ಸದಸ್ಯರು ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಗೃಹ ಬಂಧನದಲ್ಲಿ ಇರಿಸಬೇಕು. ಪ್ರಯೋಗಾಲಯ ವರದಿಯಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯ ಜತೆ ಸಂಪರ್ಕ ಹೊಂದಿದವರಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡ ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿತರಿಗೆ ಸೇವೆ ನೀಡುವ ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗೆ ಪರೀಕ್ಷೆ ನಡೆಸಬೇಕು. ಯಾವುದೇ ಆಸ್ಪತ್ರೆಗಳಲ್ಲಿ ಈಗಾಗಲೇ ತೀವ್ರ ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆಗೆ ದಾಖಲಾಗಿ ರುವವರನ್ನು (ಜ್ವರ, ಕೆಮ್ಮು ಅಥವಾ ಉಸಿರಾಟ ತೊಂದರೆ) ಪರೀಕ್ಷೆಗೆ ಒಳಪಡಿಸಬೇಕು. ಎಚ್ಚರಿಕೆ ಕ್ರಮ ಅನುಸರಿಸದೆ ಸೋಂಕಿತ ರಿಗೆ ಉಪಚರಿಸಿದವರಿಗೂ ಪರೀಕ್ಷೆ ಕಡ್ಡಾಯಗೊಳಿಸುವಂತೆ ಸೂಚಿಸಲಾಗಿದೆ.
ಆರೋಗ್ಯ ಇಲಾಖೆಗೆ ಸಹಕಾರ
ಕರೊನಾ ಬಗ್ಗೆ ಗೃಹ ಇಲಾಖೆ ಯಾವ ರೀತಿ ಕೆಲಸ ಮಾಡಬೇಕು. ಆರೋಗ್ಯ ಇಲಾಖೆಗೆ ಹೇಗೆ ಸಹಕಾರ ನೀಡಬೇಕು ಎನ್ನುವ ಬಗ್ಗೆ ಸಿಎಂ ಯಡಿಯೂರಪ್ಪ ಜತೆ ಚರ್ಚೆ ಮಾಡಲಾಗಿದ್ದು, ಈ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮುಂದೆ ಬರುವ ದಿನಗಳು ತುಂಬಾ ಸವಾಲಿನದ್ದಾಗಿದ್ದು, ಅದನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನೆರೆ ರಾಜ್ಯಗಳ ಗಡಿಯಲ್ಲಿ ನಿಗಾ: ಕರೊನಾ ವೈರಸ್ ತಡೆಗಾಗಿ ನೆರೆ ರಾಜ್ಯಗಳ ಗಡಿಯಲ್ಲಿ ನಿಗಾ ವಹಿಸಿ ಸದ್ಯಕ್ಕೆ ಸ್ಕ್ರೀನಿಂಗ್ ಮಾಡಲಿದ್ದು, ಮೂರು ದಿನಗಳ ಬಳಿಕ ಗಡಿ ಬಂದ್ ಮಾಡುವ ಬಗ್ಗೆ ಯೋಚಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಶನಿವಾರ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳ ಗಡಿ ಪ್ರದೇಶದಲ್ಲಿ ನಿಗಾಯಿಟ್ಟು ಸ್ಕ್ರೀನಿಂಗ್ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುವೆ ಎಂದರು.
ಮುನ್ನೆಚ್ಚರಿಕೆ ವಹಿಸಿ
ಸೋಂಕಿತರು ಹಾಗೂ ಶಂಕಿತರಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆಗಾಗಿ ರಾಜ್ಯದಲ್ಲಿ 48 ಸರ್ಕಾರಿ ಆಸ್ಪತ್ರೆ ಹಾಗೂ 35 ಖಾಸಗಿ ಆಸ್ಪತ್ರೆಗಳನ್ನು ಪ್ರಥಮ ಹಂತದ ಪ್ರತಿಕ್ರಿಯೆ ಆಸ್ಪತ್ರೆಗಳಾಗಿ ಗುರುತಿಸಲಾಗಿದೆ. ಕರೊನಾದಿಂದ ಪ್ರಾಣಾಪಾಯ ಇಲ್ಲ. ಆದರೆ ರೋಗ ಬರದಂತೆ ಮುನ್ನೆಚ್ಚರಿಕೆ ಅಗತ್ಯವಿದೆ ಎಂದು ಇಲಾಖೆಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.