ಜಿಲ್ಲೆ

ವಾರಾಹಿ ವಿಳಂಬ ಧೋರಣೆ ಅನುಸರಣೆ : ಗುರುರಾಜ್ ಗಂಟಿಹೊಳೆ

ಇಂದಿರಾ ಎನ್ ಕೆ

ಬೈಂದೂರು: ರಾಜ್ಯ ಸರ್ಕಾರ ವಾರಾಹಿ ಯೋಜನೆ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಯೋಜನೆ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದರೂ ಬೈಂದೂರಿನ ಯಾವುದೇ ಗ್ರಾಮಕ್ಕೆ ಇದರ ಪ್ರಯೋಜನ ಆಗುತ್ತಿಲ್ಲ. ವಾರಾಹಿ ನೀರು ಬೈಂದೂರಿನ ಗ್ರಾಮಗಳ ರೈತರ ಕೃಷಿ ಚಟುವಟಿಕೆಗೆ ಸಿಗಬೇಕು. ಈ ನಿಟ್ಟಿನಲ್ಲಿ ಜನಾಂದೋಲನದ ಮಾದರಿಯಲ್ಲಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಸಿದ್ದಾಪುರದಲ್ಲಿ ಮಂಗಳವಾರ ವಾರಾಹಿ ನದಿ ನೀರು ಬೈಂದೂರು ಕ್ಷೇತ್ರದ ಹೆಚ್ಚಿನ ಗ್ರಾಮಗಳ ಕೃಷಿ ಚಟುವಟಿಕೆಗೆ ಒದಗಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲ ರೂಪಿಸಿಲು ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ನೀರು ಒದಗಿಸುವ ಯೋಜನೆ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದರೂ ಇಲ್ಲಿನ ಯಾವುದೇ ಗ್ರಾಮಕ್ಕೆ ಇದರ ನೀರು ಸಿಗುತ್ತಿಲ್ಲ. ಹೀಗಾಗಿ ಕಾಲುವೆಗಳ ಮೂಲಕ ಬೈಂದೂರು ಕ್ಷೇತ್ರದ ಹೆಚ್ಚಿನ ಗ್ರಾಮಗಳ ಕೃಷಿ ಚಟುವಟಿಕೆಗೆ ವಾರಾಹಿ ನೀರು ಒದಗಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಗ್ರಾಮಗಳಲ್ಲಿ ಜನಾಭಿಪ್ರಾಯ ಸಂಗ್ರಹ, ಮಾಹಿತಿ ನೀಡುವುದು ಸಹಿತ ಸಮಗ್ರ ಹೋರಾಟ ರೂಪಿಸಲು ಸಮಿತಿ ರಚನೆ ಮಾಡಲಾಗಿದೆ ಎಂದರು.

ವಾರಾಹಿ ನೀರು ಜಿಲ್ಲೆ ಬೇರೆ ಬೇರೆ ತಾಲೂಕುಗಳಿಗೆ ಹೋಗುವಂತೆಯೇ ಬೈಂದೂರು ತಾಲೂಕಿಗೂ ಬರಬೇಕು. ಈ ನಿಟ್ಟಿನಲ್ಲಿ ಯೋಜನೆ ಸಮಗ್ರ ಅನುಷ್ಠಾನ ಆಗಬೇಕು. ಸಿದ್ದಾಪುರ ಏತ ನೀರಾವರಿ ಯೋಜನೆ ಕಾಮಗಾರಿಗೂ ವೇಗ ಸಿಗಬೇಕು. ವಾರಾಹಿ ಎಡದಂಡೆ ಯೋಜನೆ ಅನುಷ್ಠಾನದ ಮೂಲಕ ಕಾಲುವೆಗಳಿಂದ ಬೈಂದೂರಿನ ಗ್ರಾಮಗಳಿಗೆ ವಾರಾಹಿ ನೀರು ಪೂರೈಕೆ ಆಗಬೇಕು. ಈ ಹಿನ್ನೆಲೆಯಲ್ಲಿ ಈ ಹೋರಾಟ ರೂಪಿಸಲಾಗುತ್ತಿದೆ ಎಂದರು.

ಜಿಲ್ಲೆಯ ಕಾಪು, ಕಾರ್ಕಳ, ಹಬ್ರಿ, ಉಡುಪಿ, ಉಡುಪಿ ನಗರಕ್ಕೆ ವಾರಾಹಿ ನೀರು ನೀಡುವ ಯೋಜನೆ ಜಾರಿಯಲ್ಲಿದೆ. ಆದರೆ ಬೈಂದೂರು ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ಯೋಜನೆ ಪೂರ್ಣ ಅನುಕೂಲ ಬೈಂದೂರು ಕ್ಷೇತ್ರದ ಜನತೆಗೂ ಆಗಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟ ಸಾಗಲಿದೆ ಎಂದು ಸಂಘಟಕರು ಸಭೆಗೆ ತಿಳಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಪ್ರಮುಖರಾದ ಉಮೇಶ್ ಕಲ್ಗದ್ದೆ, ಸತೀಶ್ ಶೆಟ್ಟಿ, ಡಾ.ಅತುಲ್ ಕುಮಾರ್ ಶೆಟ್ಟಿ, ಪ್ರಾಣೇಶ್, ರವಿಶೆಟ್ಟಿ, ರೋಹಿತ್ ಕುಮಾರ್ ಶೆಟ್ಟಿ, ಪ್ರಭಾಕರ ಕುಲಾಲ್, ಹಟ್ಟಿಯಂಗಡಿ ರಾಜೀವ್ ಶೆಟ್ಟಿ, ಹಕ್ಲಾಡಿ ಶುಭಾಶ್ ಶೆಟ್ಟಿ, ಹರ್ಕುರು ಮಂಜಯ್ಯ ಶೆಟ್ಟಿ, ಹರ್ಷ ಮೊಗವೀರ ಸಿದ್ದಾಪುರ, ಕೃಷ್ಣ ಪೂಜಾರಿ, ರವಿ ಕುಲಾಲ್, 25 ಗ್ರಾಪಂಗಳ ಮುಖಂಡರು ಭಾಗವಹಿಸಿ, ಯೋಜನೆ ಬಗ್ಗೆ ಸಮಗ್ರ ಚರ್ಚೆ ನಡೆಸಿದರು.

ಆರಂಭದಲ್ಲಿ ಪ್ರತಿ ಗ್ರಾಮದಲ್ಲೂ ಸಭೆ ನಡೆಸಿ ವಾರಾಹಿ ಯೋಜನೆಯಡಿ ಬೈಂದೂರಿಗೆ ಆಗಿರುವ ಅನ್ಯಾಯ, ನಿರ್ಲಕ್ಷೃದ ಬಗ್ಗೆ ಮಾಹಿತಿ ನೀಡಲಾಗುವುದು. ಆ.15ರ ನಂತರ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟ ಅಥವಾ ಜನಾಂದೋಲನ ನಡೆಸಲಾಗುವುದು. ಕಾಲುವೆ ಮೂಲಕ ಬೈಂದೂರಿನ ಗ್ರಾಮಗಳಿಗೆ ವಾರಾಹಿ ನೀರು ಒದಗಿಸುವುದು, ವಾರಾಹಿ ಎಡದಂಡೆ ಯೋಜನೆ ಮತ್ತು ಸಿದ್ದಾಪುರ ಏತ ನೀರಾವರಿ ಯೋಜನೆ ಶಕ್ತಿ ತುಂಬುವುದು ಇದರ ಉದ್ದೇಶವಾಗಿದೆ.-ಗುರುರಾಜ್ ಗಂಟಿಹೊಳೆ, ಶಾಸಕ