ಜಿಲ್ಲೆ

ಬಿಜೆಪಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ: ಜಗದೀಶ್​ ಶೆಟ್ಟರ್

ಮಡಿಕೇರಿ: ಬಿಜೆಪಿ ಪಕ್ಷಕ್ಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್​ ಮಾಡಿರುವ ಆರೋಪ ಎಂದು ಮಾಜಿ ಸಿಎಂ, ವಿಧಾನಪರಿಷತ್​ ಸದಸ್ಯ ಜಗದೀಶ್​ ಶೆಟ್ಟರ್​ ಕಿಡಿಕಾರಿದ್ದಾರೆ.

ಕೊಡಗಿನ ಕುಶಾಲನಗರದಲ್ಲಿ ಈ ಕುರಿತು ಮಾತನಾಡಿದ ಶೆಟ್ಟರ್​, ಈ ವಿಚಾರವಾಗಿ ಸರ್ಕಾರ ಈಗಾಗಲೇ ತನಿಖೆಗೆ ಆದೇಶಿಸಿದ್ದು, ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದ್ದಾರೆ.

ಬಿಜೆಪಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂಬುದಕ್ಕೆ ಅವರ ಪಕ್ಷದ ಶಾಸಕ ಬಸನ್​ಗೌಡ ಪಾಟೀಲ್​ ಮಾಡಿರುವ ಆರೋಪವೇ ಸಾಕ್ಷಿ. ಅಂತಹ ಪಕ್ಷಕ್ಕೆ ನಾನು ಮತ್ತೆ ಹೋಗುವುದಿಲ್ಲ. ಸರ್ಕಾರ ತನಿಖೆಗೆ ಆದೇಶಿಸಿದ್ದು, ವರದಿ ಬಂದ ನಂತರ ಸತ್ಯಾಸತ್ಯತೆ ಹೊರಬರಲಿದೆ.

ಕನ್ನಡ ನಾಮಫಲಗಳ ಆಳವಡಿಕೆಗೆ ಆಗ್ರಹಕ್ಕೆ ಪ್ರತಿಕ್ರಿಯಿಸಿ, ಕನ್ನಡ ಭಾಷೆಯ ಕುರಿತು ಜನರಲ್ಲಿ, ಉದ್ಯಮಿಗಳಲ್ಲಿ ಜಾಗೃತಿ ಮೂಡಿಸಬೇಕು. ಕಾನೂನು ಕೈಗೆ ತೆಗೆದುಕೊಂಡರೆ ಅದಕ್ಕೆ ಕೊನೆ ಎಂಬುದು ಇರುವುದಿಲ್ಲ. ತಮಿಳುನಾಡಿನಲ್ಲಿ ಇಂದು ಜಾಗೃತಿ ಇದೆ. ಅದೇ ಬಗೆಯ ಜಾಗೃತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಇತರೆ ಸಂಘಟನೆಗಳು ಮಾಡಬೇಕು ಅದಕ್ಕೆ ಸರ್ಕಾರ ಬೆಂಬಲ ನೀಡಬೇಕು ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.