ವಿಜಯವಾಣಿ ಸುದ್ದಿಜಾಲ ಬೈಂದೂರು
ಸನಾತನ ಭಾರತೀಯ ಸಂಸ್ಕೃತಿಯ ಶಿಕ್ಷಣವನ್ನು ಬಾಲ್ಯದಲ್ಲಿ ಮಕ್ಕಳಿಗೆ ನೀಡುವ ಮೂಲಕ ಮಕ್ಕಳನ್ನು ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಪಾಲಕರ ಮೇಲಿದೆ. ಭ್ರಾತೃತ್ವದ ಸಂಕೇತವಾಗಿರುವ ರಕ್ಷಾಬಂಧನ ಪ್ರಸ್ತುತ ತನ್ನ ನಿಜ ಸ್ವರೂಪ ಕಳೆದುಕೊಳ್ಳುತ್ತಿದೆ. ಇಂತಹ ಸಂದರ್ಭ ಮಕ್ಕಳಿಗೆ ರಕ್ಷಾಬಂಧನದ ಮಹತ್ವವನ್ನು ಸಾರುತ್ತಾ ನಿರಂತರವಾಗಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಮತ್ತು ಸನಾತನ ಸಂಸ್ಕೃತಿಯ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿರುವ ಸೇವಾ ಸಂಗಮ ಶಿಶುಮಂದಿರದ ಕಾರ್ಯ ಶ್ಲಾಘನೀಯ ಎಂದು ಉಪನ್ಯಾಸಕ ಮಂಜುನಾಥ ಹೇಳಿದರು.
ಬೈಂದೂರು ಸೇವಾ ಸಂಗಮ ಶಿಶುಮಂದಿರದಿಂದ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೇವಾ ಸಂಗಮದ ಅಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಂಗಮದ ವ್ಯವಸ್ಥಾಪಕ ದಿನೇಶ ಇದ್ದರು. ಆಶಾ ದಿನೇಶ್ ನಿರೂಪಿಸಿದರು. ನಂತರ ಶಿಶುಮಂದಿರದ ಮಕ್ಕಳು, ಮಾತೆಯರು ಮತ್ತು ಸೇವಾ ಸಂಗಮದ ಪದಾಧಿಕಾರಿಗಳು ಬೈಂದೂರಿನ ರಥಬೀದಿ ವ್ಯಾಪ್ತಿಯ ನಾಗರಿಕರಿಗೆ ಹಾಗೂ ಬೈಂದೂರು ಪೊಲೀಶ್ ಠಾಣೆ ಸಿಬ್ಬಂದಿಗೆ ರಕ್ಷಾ ಬಂಧನ ಕಟ್ಟಿದರು.