ವಿದ್ಯಾರ್ಥಿ ಜೀವನದಲ್ಲಿ ತಾಯಂದಿರ ಪಾತ್ರ ಅಗತ್ಯ

samavesha
samavesha
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಅಮ್ಮನ ಮಡಿಲಿನಲ್ಲಿ ಸುವಿಚಾರ ಕಲಿತ ಮಕ್ಕಳು ಶ್ರೇಷ್ಠ ಸಾಧಕರಾಗಿ ಮೂಡಿ ಬರಲು ಸಾಧ್ಯ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಮಾತೆಯರ ಪಾತ್ರ ಮಹತ್ವದ್ದಾಗಿದೆ. ಮಾತೃ ಪ್ರೀತಿಯ ಜತೆಗೆ ಅಪ್ಪನ ತ್ಯಾಗ, ಪರಿಶ್ರಮದ ಬಗ್ಗೆ ಅರಿವು ಮೂಡಿಸುವ ಕೆಲಸ ತಾಯಂದಿರಿಂದ ನಡೆಯಬೇಕು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

ಶ್ರೀ ಸರಸ್ವತೀ ಮಾತೃ ಮಂಡಳಿ ನೇತೃತ್ವದಲ್ಲಿ ಪಡುಕುತ್ಯಾರು ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಭಾನುವಾರ ನಡೆದ ಮಾತೃ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.

ಸಂಸ್ಕಾರಯುತ ಮಹಿಳೆ ವಿಚಾರದಲ್ಲಿ ಉಪನ್ಯಾಸ ನೀಡಿದ ಶಿಕಾರಿಪುರ ಆನೆಗುಂದಿ ಮಹಾಸಂಸ್ಥಾನ ಬೆಳಗುತ್ತಿ ಮಠದ ಮಾತೋಶ್ರೀ ಹೇಮಲತಾ ಎನ್. ಸ್ವಾಮೀಜಿ, ವಿಜ್ಞಾನ ತಂತ್ರಜ್ಞಾನದಿಂದ ಸುಖ ಸಂತೋಷ ಕ್ಷಣಿಕ. ಮಾತಾ-ಪಿತರು ಮಕ್ಕಳಿಗೆ ಸಂಸ್ಕಾರ ನೀಡುವ ಶಿಕ್ಷಣಕ್ಕೆ ಒತ್ತು ನೀಡಬೇಕು. ನಕಾರಾತ್ಮಕ ವಿಚಾರದಿಂದ ದೂರವಿಡುವ ಸತ್‌ಸಂಕಲ್ಪ ಮಾಡಬೇಕು ಎಂದರು.

ಸಂಸ್ಕಾರಯುತ ವಿದ್ಯಾರ್ಥಿಗಳು ವಿಚಾರದಲ್ಲಿ ಉಪನ್ಯಾಸ ನೀಡಿದ ವಿದ್ವಾನ್ ಮೌನೇಶ್ ಶರ್ಮಾ ಪಡುಕುತ್ಯಾರು, ಸಂಸ್ಕಾರಯತಯವಾದ ಶಿಕ್ಷಣ, ಜೀವನ ಪದ್ಧತಿಯಿಂದಾಗಿ ಮನುಷ್ಯ ಸುಸಂಸ್ಕೃತನಾಗಿ ಬೆಳೆಯಲು ಸಾಧ್ಯ ಎಂದರು.

ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾಲಕ್ಷ್ಮಣ ಆಚಾರ್ಯ ಉಡುಪಿ ಅಧ್ಯಕ್ಷತೆ ವಹಿಸಿದ್ದರು. ಮಾತೋಶ್ರೀ ಸರಳಮ್ಮಗುರುನಾಥ ಸ್ವಾಮೀಜಿ ಶಿಕಾರಿಪುರ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ.ಗಂಗಾಧರ ಆಚಾರ್ಯ ಉಡುಪಿ, ಮುನಿಯಾಲು ಸಂಜೀವಿನಿ ಗೋಧಾಮದ ಸವಿತಾ ಆರ್.ಆಚಾರ್ಯ, ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಸುಂದರ ಆಚಾರ್ಯ ಬೆಳುವಾಯಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಕೇಶವ ಶರ್ಮಾ ಇರುವೈಲು, ಪ್ರಭಾಕರ್ ಆಚಾರ್ಯ ಕೋಟೆಕಾರ್, ದಿನೇಶ್ ಆಚಾರ್ಯ ಪಡುಬಿದ್ರಿ, ಜನಾರ್ದನ ಆಚಾರ್ಯ ಅರಿಕ್ಕಾಡಿ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್, ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ ಉಪಸ್ಥಿತರಿದ್ದರು. ಸರಸ್ವತಿ ಮಾತೃ ಮಂಡಳಿ ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಪ್ರಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ದೀಪಾ ಸುರೇಶ್ ಸ್ವಾಗತಿಸಿದರು. ಉಪಾಧ್ಯಕ್ಷೆ ಲತಾ ಶಿವಾನಂದ ಆಚಾರ್ಯ ವಂದಿಸಿದರು. ಕೆ.ಎಂ.ಗಂಗಾಧರ್ ಆಚಾರ್ಯ, ಗೀತಾಚಂದ್ರ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

ಅಭಿನಂದನೆ, ಬಹುಮಾನ ವಿತರಣೆ

ಪಡುಕುತ್ಯಾರು ಶ್ರೀ ಸರಸ್ವತೀ ಮಾತೃ ಮಂಡಳಿ, ಸಮಾಜದವರಿಂದ ಗುರುಪಾದುಕಾ ಪೂಜೆ ನೆರವೇರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಸೌಮ್ಯ ಅವರನ್ನು ಅಭಿನಂದಿಸಲಾಯಿತು. ಶಾಲಾ-ಕಾಲೇಜು, ಸಾಮಾನ್ಯ ವಿಭಾಗದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net