ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಪುದು ಗ್ರಾಮದ ಸುಜೀರು ದೈವಸ್ಥಾನದ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ ಹತ್ತನೆ ಮೈಲು ಸಂಪರ್ಕಿಸುವ ಕಾಲುದಾರಿ ಸಂಪೂರ್ಣ ಕೆಸರುಮಯವಾಗಿ ಜನರು ನಡೆದಾಡಲು ಸಾಧ್ಯವಾಗದೆ ಆಡಳಿತ ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುವಂತೆ ಮಾಡಿದೆ.
ಈ ಭಾಗದ ಜನರ ಸಂಪರ್ಕಕ್ಕೆ ಅತಿ ಅಗತ್ಯವಾಗಿ ಬೇಕಾಗಿದ್ದ ಕಾಲುದಾರಿಯನ್ನು ಯೋಗ್ಯ ರಸ್ತೆಯಾಗಿ ಮಾಡಿಕೊಡಿ ಎಂದು ಹಲವು ಭಾರಿ ಮನವಿ ಸಲ್ಲಿಸಿ ಕೊನೆಯ ಪ್ರಯತ್ನ ಎನ್ನುವಂತೆ ಸ್ಥಳೀಯ ಗ್ರಾಮಸ್ಥರು ಕಳೆದ ಜುಲೈ 24ರಂದು ಪುದು ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ, ಅದೇ ದಿನ ಪಿಡಿಒ ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ ಬಳಿಕ ಗ್ರಾಮಸ್ಥರ ಸಮಸ್ಯೆಗೆ ಪಂಚಾಯಿತಿ ಗಮನ ಕೊಡದ ಪರಿಣಾಮ ಮುಂದೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಯಥಾಸ್ಥಿತಿಯಲ್ಲಿ ಉಳಿದಿದೆ. ಇದೀಗ ಒಳಭಾಗದಿಂದ ಮರಳು ಸಾಗಿಸುವ ಟಿಪ್ಪರ್ ಲಾರಿಗಳು ಓಡಾಡಿ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುಜೀರು ಪ್ರದೇಶದ ಜನರಿಗೆ ಹಲವಾರು ವರ್ಷದಿಂದ ಸಂಪರ್ಕ ಕೊಂಡಿಯಾಗಿದ್ದ ಕಾಲುದಾರಿಯಲ್ಲಿ ಕೆಸರು ತುಂಬಿಕೊಂಡು ರಾಡಿಯೆದ್ದಿದೆ. ಪಕ್ಕನೆ ನೋಡುವಾಗ ಇದು ಕೆಸರುಗದ್ದೆಯಂತೆ ಕಾಣುತ್ತದೆ. ಈ ಪ್ರದೇಶದಲ್ಲಿ 300 ಮನೆಗಳು ಇದ್ದು ಜನರು ದಿನನಿತ್ಯದ ಕೆಲಸಕ್ಕೆ ನಗರಕ್ಕೆ ಹೋಗಲು, ಮಕ್ಕಳು ಶಾಲೆಗೆ ಹೋಗಲು ಈ ಕಾಲುದಾರಿಯನ್ನೇ ಅವಲಂಬಿಸಿದ್ದಾರೆ.
7ವರ್ಷದಿಂದ ಈ ಕಾಲುದಾರಿಯ ಪಕ್ಕದಲ್ಲಿ ಉದ್ಯಮಿಯೊಬ್ಬರು ಖಾಸಗಿ ಜಾಗ ಖರೀದಿಸಿ ಮಣ್ಣು ತುಂಬಿದ್ದು ಮಳೆಗೆ ಮಣ್ಣೆಲ್ಲಾ ಈ ಕಾಲುದಾರಿಗೆ ಬಿದ್ದು ಕಾಲುದಾರಿ ಮುಚ್ಚಿ ಹೋಗಿದೆ. ಇದರಿಂದಾಗಿ ಕಾಲುದಾರಿಯ ಪಕ್ಕದ ಖಾಸಗಿ ರಸ್ತೆಯಲ್ಲಿ ನಡೆದಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿ ಕಾಲುದಾರಿ ಸರಿಪಡಿಸಿಕೊಡುವಂತೆ ಪಂಚಾಯಿತಿಗೆ ಜುಲೈನಲ್ಲಿ ಮನವಿ ಸಲ್ಲಿಸಿದ್ದರು.
ಸ್ಥಳ ಪರೀಶೀಲಿಸಿದ ಪಿಡಿಒ ಹಾಗೂ ಜಿಪಂ ಕಿರಿಯ ಇಂಜಿನಿಯರ್ ಮರುದಿನದಿಂದಲೇ ಜೆಸಿಬಿ ಬಳಿಸಿ ಕಾಲುದಾರಿ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಬಳಿಕ ಗ್ರಾಮಸ್ಥರ ಕಣ್ಣೊರೆಸುವ ತಂತ್ರ ಎನ್ನುವಂತೆ ಜೆಸಿಬಿ ಮೂಲಕ ಸ್ವಲ್ಪ ಕೆಲಸ ಮಾಡಲಾಗಿದೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಇದೀಗ ರಸ್ತೆ ತುಂಬಾ ಕೆಸರು ತುಂಬಿಕೊಂಡು ಜನರು ಮುಖ್ಯ ರಸ್ತೆಗೆ ಬರಲು ಕೆಸರಿನಲ್ಲಿ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ತಕ್ಷಣ ರಸ್ತೆಯನ್ನು ಸರಿಪಡಿಸಿ ಕೊಡುವಂತೆ ಜನಪ್ರತಿನಿಧಿಗಳಲ್ಲಿ ಆಗ್ರಹಿಸಿದ್ದಾರೆ.