IPL Betting Promotion : ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಮತ್ತು ಕಲಾವಿದರ ವಿರುದ್ಧ ತೆಲಂಗಾಣದ ಪೊಲೀಸರು ಈಗಾಗಲೇ ಸಮರ ಸಾರಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಕಲಾವಿದರ ವಿರುದ್ಧ ಪ್ರಕರಣ ದಾಖಲಿಸಿ, ನೋಟಿಸ್ ನೀಡಿ ಬಿಸಿ ಮುಟ್ಟಿಸುತ್ತಿದ್ದಾರೆ. ಕರ್ನಾಟಕದಲ್ಲೂ ಇದೇ ರೀತಿ ಕ್ರಮ ಆಗಬೇಕೆಂದು ಆಗ್ರಹ ಕೇಳಿಬಂದ ಬೆನ್ನಲ್ಲೇ ರಾಜ್ಯದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.
ಪ್ರಸ್ತುತ 18ನೇ ಐಪಿಎಲ್ ಸೀಸನ್ ನಡೆಯುತ್ತಿರುವುದು ಗೊತ್ತೇ ಇದೆ. ಪ್ರತಿ ಪಂದ್ಯಕ್ಕೂ ಬೆಟ್ಟಿಂಗ್ ಆಡುವವರ ಸಂಖ್ಯೆ ಏನು ಕಡಿಮೆ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಅನೇಕ ಅಪ್ಲಿಕೇಶನ್ಗಳು ಆನ್ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿವೆ. ಹಣದ ದುರಾಸೆಯಿಂದ ಇಂತಹ ಅಪ್ಲಿಕೇಶನ್ಗಳಿಗೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಪ್ರಚಾರ ಕೂಡ ನೀಡುತ್ತಿದ್ದಾರೆ. ಆನ್ಲೈನ್ ಜೂಜಿನ ಬಲೆಗೆ ಬಿದ್ದು, ಎಷ್ಟೋ ಮಂದಿ ಹಣ, ಆಸ್ತಿ ಕಳೆದುಕೊಳ್ಳುತ್ತಿದ್ದು, ತಮ್ಮ ಕುಟುಂಬವನ್ನು ಬೀದಿಗೆ ಎಳೆಯುತ್ತಿದ್ದಾರೆ.
ಇದೀಗ ಆನ್ಲೈನ್ನಲ್ಲಿ ಇಂತಹ ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುವವರ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಸಮರ ಸಾರಿದ್ದಾರೆ. ರಾಜ್ಯದಲ್ಲಿ ಸಾಮಾಜಿಕ ಜಾಲತಾಣದಿಂದಲೇ ಖ್ಯಾತಿ ಪಡೆದಿರುವ ವರುಣ್ ಆರಾಧ್ಯ, ಸೋನುಗೌಡ, ಶಿಲ್ಪಾಗೌಡ ಹಾಗೂ ದೀಪಕ್ ಗೌಡ ಸೇರಿದಂತೆ 40ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಬೆಂಗಳೂರಿನ ಅಪರಾಧ ವಿಭಾಗದ ಪೊಲೀಸರು ನೋಟಿಸ್ ನೀಡಿ ವಾರ್ನಿಂಗ್ ಕೊಟ್ಟಿದ್ದಾರೆ.
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ಇನ್ಸ್ಟಾಗ್ರಾಂ ಚಟುವಟಿಕೆಯ ಮೇಲೆ ನಿಗಾ ಇಡಲಾಗಿದ್ದು, ಒಂದು ವೇಳೆ ಇಂತಹ ಆ್ಯಪ್ಗಳನ್ನು ಮತ್ತೆ ಪ್ರಚಾರ ಮಾಡಿದರೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಕೆಲವು ಇನ್ಫ್ಲುಯೆನ್ಸರ್ಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗಿದ್ದು, ಈಗಾಗಲೇ 20ಕ್ಕೂ ಅಧಿಕ ಇನ್ಫ್ಲುಯೆನ್ಸರ್ಗಳ ವಿಚಾರಣೆ ಸಹ ನಡೆದಿದೆ ಎನ್ನಲಾಗಿದೆ. ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗದೇ ರಾಜ್ಯಾದ್ಯಂತ ಯಾರೆಲ್ಲ ಇನ್ಫ್ಲುಯೆನ್ಸರ್ಗಳು ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡುತ್ತಿದ್ದಾರೋ ಅವರಿಗೆಲ್ಲ ವಾರ್ನಿಂಗ್ ಕೊಡಲಾಗಿದೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡದಂತೆ ಹೇಳಿ ಕಳುಹಿಸಲಾಗಿದೆ.
ಇನ್ನು ತೆಲಂಗಾಣದಲ್ಲಿ ನಟ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ನಟಿ ಶೋಭಾ ಶೆಟ್ಟಿ, ಪ್ರಕಾಶ್ ರಾಜ್ ಸೇರಿದಂತೆ ಅನೇಕ ಕಲಾವಿದರಿಗೆ ಬೆಟ್ಟಿಂಗ್ ಆ್ಯಪ್ ಪ್ರಚಾರ ಸಂಬಂಧ ಪೊಲೀಸರು ನೋಟಿಸ್ ನೀಡಿದ್ದರು. ಪ್ರಚಾರ ಮಾಡುವ ಪ್ರತಿಯೊಬ್ಬರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. (ಏಜೆನ್ಸೀಸ್)