ತುಮಕೂರು: ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ವಿಜೃಂಭಣೆಯಿಂದ ಆಚರಿಸಲ್ಪಟ್ಟಿದ್ದರೆ, ಇಲ್ಲೊಂದು ಕಡೆ ಕಸದ ವಾಹನದಲ್ಲಿ ಕೆಂಪೇಗೌಡರ ಫೋಟೋ ಇಟ್ಟು ಮೆರವಣಿಗೆ ಮಾಡಲಾಗಿದೆ ಎಂಬ ವಿಚಾರ ಇದೀಗ ವಿವಾದ ಉಂಟುಮಾಡಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ಪುರಸಭೆಯವರು ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಹೀಗಾಗಿದ್ದು, ಈ ಕುರಿತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದೂ ನಡೆದಿದೆ. ಪುರಸಭೆ ಅಧಿಕಾರಿಗಳಿಂದ ಕೆಂಪೇಗೌಡರಿಗೆ ಅವಮಾನ ಮಾಡಿದಂತಾಗಿದೆ ಎಂದೂ ಆರೋಪಿಸಲಾಗಿದೆ.
ಕುಣಿಗಲ್ ಪುರಸಭೆ ವ್ಯಾಪ್ತಿಯ ಕಸದ ವಾಹನದ ಮೇಲ್ಭಾಗ ಹಾಗೂ ಪಕ್ಕದಲ್ಲಿ ಕೆಂಪೇಗೌಡರ ಫ್ಲೆಕ್ಸ್ ಇಟ್ಟು ಮೆರವಣಿಗೆ ಮಾಡಲಾಗಿದೆ. ಕೆಂಪೇಗೌಡರ ಜಯಂತಿ ಅದ್ದೂರಿ ಆಚರಣೆ ವೇಳೆ ಅಧಿಕಾರಿಗಳ ಈ ನಡೆಯಿಂದ ಮಹಾನ್ ವ್ಯಕ್ತಿಗೆ ಅಪಮಾನ ಮಾಡಿದಂತಾಗಿದೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.