ಜಿಲ್ಲೆ

ಕಡಬ-ಪಂಜ ರಸ್ತೆ ಪರಿಶೀಲನೆ : ಕಳಪೆ ತೇಪೆ ಕಾಮಗಾರಿಗೆ ಸಾರ್ವಜನಿಕರ ವಿರೋಧ ಹಿನ್ನೆಲೆ

ಕಡಬ: ಕಡಬ-ಪಂಜ ರಸ್ತೆಯಲ್ಲಿ ಕೋಡಿಂಬಾಳದಿಂದ ಕಡಬದ ವರೆಗಿನ ರಸ್ತೆಯಲ್ಲಿ ಉಂಟಾದ ಹೊಂಡಗಳನ್ನು ಮುಚ್ಚುವ ಕಾರ್ಯ ಕಲ್ಲಂತ್ತಡ್ಕ ಎಂಬಲ್ಲಿ ಬುಧವಾರ ಆರಂಭಗೊಂಡಿದ್ದು, ಇದಕ್ಕೆ ಸ್ಥಳೀಯರು ಕಳಪೆ ಕಾಮಗಾರಿ ಎಂದು ಆಕ್ಷೇಪ ವ್ಯಕ್ತಪಡಿಸಿ ಕಾಮಗಾರಿ ನಿಲ್ಲಿಸಿದ ಹಿನ್ನೆಲೆಯಲ್ಲಿ ಗುರುವಾರ ಸುಳ್ಯ ಲೋಕೋಪಯೋಗಿ ಇಲಾಖೆಯ ಎ.ಇ.ಇ. ಗೋಪಾಲ್ ಹಾಗೂ ಜೆ.ಇ. ಪರಮೇಶ್ವರ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.

ಪಿಡಬ್ಲುೃಡಿ ಎ.ಇ.ಇ. ಗೋಪಾಲ್ ಮಾತನಾಡಿ, ಈಗಾಗಲೇ ಕಡಬ-ಪಂಜ ರಸ್ತೆಯಲ್ಲಿ ಪಂಜದಿಂದ ಏಳು ಕಿ.ಮೀ.ನಷ್ಟು ರಸ್ತೆಗೆ ಗುಂಡಿ ಮುಚ್ಚುವ ಕಾಮಗಾರಿಗೆ ಸುಮಾರು ಆರು ಲಕ್ಷದಷ್ಟು ಹಣ ಮಂಜೂರು ಆಗಿದೆ. ಇದರಲ್ಲಿ ತೆರಿಗೆಗಳು ಕಡಿತವಾಗಿ ಸುಮಾರು 5 ಲಕ್ಷದಷ್ಟು ಹಣ ಮಾತ್ರ ಕಾಮಗಾರಿಗೆ ವಿನಿಯೋಗವಾಗುತ್ತದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರಾದ ವೆಂಕಟ್ರಮಣ ಕುತ್ಯಾಡಿ, ಗಿರೀಶ್ ಕೊರುಂದೂರು, ರುರಾಮ ನಾಕ್, ರಸ್ತೆ ತೀವ್ರ ಹದಗೆಟ್ಟಿರುವುದು ಕಡಬದಿಂದ ಕೋಡಿಂಬಾಳದವರೆಗೆ ಇಲ್ಲಿ ರಸ್ತೆ ತುಂಬಾ ಕಡೆ ದೊಡ್ಡಮಟ್ಟದ ಹೊಂಡ ಗುಂಡಿಗಳಿಂದ ಕೂಡಿದೆ. ಈ ರಸ್ತೆಗೆ ಕೇವಲ ತೇಪೆ ಹಾಕಿದರೆ ಸಾಲದು ಅಷ್ಟು ಅಗಲ ರಸ್ತೆಯನ್ನು ಮರು ಡಾಮರೀಕರಣ ಮಾಡಬೇಕು. ಅಲ್ಲದೆ ನಿನ್ನೆ ಪ್ರಾರಂಭಗೊಂಡ ಕಾಮಗಾರಿ ಕಳಪೆಯಾಗಿದ್ದು, ಈ ರೀತಿಯಾದರೆ ನೀವು ಕಾಮಗಾರಿ ನಡೆಸುವುದು ಯಾಕೆ ಎಂದು ಪ್ರಶ್ನಿಸಿದರು.

ಈ ವೇಳೆ ಉತ್ತರಿಸಿದ ಇಂಜಿನಿಯರ್ ಮರುಡಾಂಬರೀಕರಣ ಮಾಡುವಷ್ಟು ಹಣ ಇಲ್ಲ, ಈಗ ಬಿಡುಗಡೆಯಾದ ಹಣ 185 ಚದರ ಮೀಟರ್ ಮಾತ್ರ ಹೊಂಡಗುಂಡಿಗಳನ್ನು ಮುಚ್ಚಬಹುದು. ಮರುಡಾಂಬರೀಕರಣ ಅಂದಾಜು ಪಟ್ಟಿ ತಯಾರಿಸಿ ಅನುದಾನ ಬಂದ ಬಳಿಕವೇ ಮಾಡಬೇಕಷ್ಟೆ ಎಂದು ಉತ್ತರಿಸಿದರು.

ಗುಂಡಿ ಮಾತ್ರ ಮುಚ್ಚುವುದಾದರೆ ಕಾಮಗಾರಿ ನಡೆಸುವುದು ಬೇಡ, ನಾವು ಬಿಡುವುದಿಲ್ಲ ಎಂದು ಕೆಲವರು ಹೇಳಿದರು. ಬಳಿಕ ಮಧ್ಯಪ್ರವೇಶಿಸಿದ ಆಟೋ ಚಾಲಕ ಮಾಲೀಕ ಸಂಘ ಅಧ್ಯಕ್ಷ ಚೆನ್ನಪ್ಪ ಗೌಡ, ಈಗ ಬಂದ ಅನುದಾನದಲ್ಲಿ ಕಾಮಗಾರಿ ನಡೆಸಿ, ಆದರೆ ಕಳಪೆ ಕಾಮಗಾರಿ ನಡೆಸಬಾರದು ಎಂದು ಹೇಳಿದರು. ಎ.ಇ.ಇ. ಮರುಡಾಂಬರೀಕರಣಕ್ಕೆ ನೀವು ಶಾಸಕರಿಗೆ ಹಾಗೂ ಮೇಲಧಿಕಾರಿಗಳಿಗೆ ಮನವಿ ಕೊಡಿ ನಾವು ಪ್ರಯತ್ನಪಡುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಹೊಂಡಗುಂಡಿಗಳಿರುವ ರಸ್ತೆಯನ್ನು ಅಧಿಕಾರಿಗಳು ಸ್ಥಳೀಯರೊಂದಿಗೆ ವೀಕ್ಷಣೆ ಮಾಡಿದರು.