ಕೊಪ್ಪಳ: ಅನಾರೋಗ್ಯಕ್ಕೆ ತುತ್ತಾದ ಮಗುವಿಗೆ ಪಾಲಕರು ಸರಿಯಾದ ಚಿಕಿತ್ಸೆ ಕೊಡಿಸುವ ಬದಲು ಅಗರಬತ್ತಿಯಿಂದ ಸುಟ್ಟಿದ್ದಕ್ಕೆ ನಂಜಾಗಿ ಹಸುಗೂಸು ಮೃತಪಟ್ಟ ಧಾರುಣ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. 2024 ರ ನವೆಂಬರ್ ನಲ್ಲಿ ಏಳು ತಿಂಗಳ ಮಗುವಿಗೆ ಜ್ವರ ಕಾಣಿಸಿಕೊಂಡಿದೆ. ಆರೋಗ್ಯಾಧಿಕಾರಿಗಳು ಔಷಧ ನೀಡಿದ್ದಾರೆ. ಆದರೂ ಚೇತರಿಕೆ ಕಂಡಿಲ್ಲ. ಬಳಿಕ ಖಾಸಗಿ ಆಸ್ಪತ್ರೆಯೊಂದರಲ್ಲಿ ತೋರಿಸಿದ್ದಾರೆ. ಕಡಿಮೆಯಾಗದಿದ್ದಾಗ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಮಗುವಿನ ಮೈಯಲ್ಲಿ ಸುಟ್ಟ ಗಾಯಗಳಿರುವುದು ವೈದ್ಯರ ಗಮನಕ್ಕೆ ಬಂದಿದೆ. ಈ ಬಗ್ಗೆ ಶಿಶುಮರಣ ಸಭೆಯಲ್ಲಿ ಮಗುವಿನ ಸಾವಿನ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಸಾವಿಗೆ ಊದುಬತ್ತಿಯಿಂದ ಸುಟ್ಟ ಗಾಯಗಳಿಂದ ಉಂಟಾದ ನಂಜು ಕಾರಣವೆಂದು ಹೇಳಿದ್ದಾರೆ. 2024 ರ ಡಿಸೆಂಬರ್ 4ರಂದು ಮಗು ಮೃತಪಟ್ಟಿದೆ. ತಕ್ಷಣ ಅಲರ್ಟ್ ಆದ ಮಕ್ಕಳ ರಕ್ಷಣಾಧಿಕಾರಿಗಳು ಮಗುವಿನ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಗುವಿನ ತಾಯಿ ಅನಾರೋಗ್ಯ ಕಡಿಮೆ ಆಗದ ಕಾರಣ ಅಗರಬತ್ತಿಯಿಂದ ಬೆಚ್ಚಗೆ ಮಾಡಿದ್ದೆ. ಕಾಲುಗಳಿಗೆ ಬಟ್ಟೆಯಿಂದ ಕಾವು ನೀಡಿರುವೆ. ಇದರಿಂದ ಮಗುವಿನ ಸಾವು ಸಂಭವಿಸುತ್ತದೆ ಎಂದು ಅರಿವಿರಲಿಲ್ಲ ಎಂದು ಘಟನೆ ವಿವರಿಸಿದ್ದಾಳೆ.
ಘಟನೆಗೆ ಮಗುವಿನ ತಾಯಿ ಅಯ್ಯಮ್ಮ ಅವರೇ ಕಾರಣ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಮಕ್ಕಳರಕ್ಷಣಾಧಿಕಾರಿಗಳು ನೀಡಿದ ದೂರಿನ ಅನ್ವಯ ಕನಕಗಿರಿ ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ.