ಜಿಲ್ಲೆ

ಇಫ್ತಾರ್ ಕೂಟ ಸಮಾಜಕ್ಕೆ ಮಾದರಿ : ಮುಹಮ್ಮದ್ ಕುಂಞ ಅಭಿಮತ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಡಾ.ಮೋಹನ ಆಳ್ವರ ನೇತೃತ್ವದಲ್ಲಿ ಆಳ್ವಾಸ್ ಸಂಸ್ಥೆ ನಡೆಸುತ್ತಿರುವ ಇಫ್ತಾರ್‌ಕೂಟ ಸಮಾಜಕ್ಕೆ ಮಾದರಿ. ಕೆಡುಕನ್ನು ಕೆಡುಕಿನಿಂದ ನಿವಾರಿಸಲು ಅಸಾಧ್ಯ. ಅದನ್ನು ಒಳಿತು, ಪ್ರೀತಿಯ ಸಂದೇಶದ ಮೂಲಕ ನಿವಾರಿಸಬೇಕು. ಈ ನಿಟ್ಟಿನಲ್ಲಿ ಇದು ಸಮಾಜಕ್ಕೆ ಶಕ್ತಿಯುತ ಸಂದೇಶ ನೀಡುವ ಕಾರ್ಯಕ್ರಮ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಹೇಳಿದರು.

ಮೂಡುಬಿದಿರೆ ವಿದ್ಯಾಗಿರಿಯ ಕೃಷಿಸಿರಿ ಆವರಣದಲ್ಲಿ ರಮಜಾನ್ ಬೃಹತ್ ಇಫ್ತಾರ್ ಕೂಟದಲ್ಲಿ ಶನಿವಾರ ರಮಜಾನ್ ಸಂದೇಶ ನೀಡಿದರು.

ಬೀದರ್‌ನ ಶಾಯಿನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ಅಧ್ಯಕ್ಷ ಅಬ್ದುಲ್ ಖಾದಿರ್ ಶಾಯಿನ್ ಮಾತನಾಡಿದರು. ಉಡುಪಿ ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಲ್, ಟ್ರಸ್ಟಿ ವಿವೇಕ್ ಆಳ್ವ, ಡಾ.ವಿನಯ್ ಆಳ್ವ, ಉದ್ಯಮಿ ಭಾರತ್ ಮುಸ್ತಫ, ವಿಜಯಪುರದ ರೋಯಲ್ ಶಾಲೆಯ ನಿರ್ದೇಶಕ ಮೊಹಮ್ಮದ್ ಇಂಡಿ, ಆಳ್ವಾಸ್ ಫಿಝೇರಿಯಾ ಹಾಗೂ ಬಿಸಿಸಿ ಮಾಲೀಕ ಎಂ.ಎಸ್.ಜೈನುದ್ದೀನ್ ಇದ್ದರು.

ಫಾರ್ಚೂನ್ ಬಿಲ್ಡರ್ಸ್ ಮುಖ್ಯಸ್ಥ ಅಬೂಲಾಲ ಪುತ್ತಿಗೆ ನಿರೂಪಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಸಲಾದ 22ನೇ ವರ್ಷದ ಇಫ್ತಾರ್ ಕೂಟದಲ್ಲಿ ವಿದ್ಯಾರ್ಥಿಗಳಲ್ಲದೆ ಸ್ಥಳೀಯರ ಸಹಿತ 12,000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಇಫ್ತಾರ್ ಬಳಿಕ ಸಾಮೂಹಿಕ ನಮಾಜ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮನಸ್ಸನ್ನು ಕಟ್ಟುವ, ಮಾನವ ಸಮುದಾಯ ಒಟ್ಟು ಸೇರಿಸುವ ಕೆಲಸ ನಮ್ಮೆಲ್ಲರದ್ದಾಗಬೇಕು. ಸೌಹಾರ್ದ ಬದುಕು ನಮ್ಮದಾಗಬೇಕು. ಆಳ್ವಾಸ್ ಸರ್ವೋ ಜನೋ ಸುಖಿನೋ ಭವಂತು ತತ್ವದಡಿ ಸಂಸ್ಥೆಯಲ್ಲಿ ದೀಪಾವಳಿ, ಕ್ರಿಸ್‌ಮಸ್, ಇಫ್ತಾರ್, ಮಹಾವೀರ ಜಯಂತಿ, ಓಣಂ, ಮಣಿಪುರದ ನಿಂಗೋಲ್ ಚಕೋಬಾ, ಶಜಿಬಾ ಶರೋಬಾ, ಶ್ರೀಲಂಕಾ ದಿನಾಚರಣೆ, ಸ್ವಾತಂತ್ರೃ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ನಾಡುನುಡಿಗಾಗಿ- ನುಡಿಸಿರಿ, ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ- ವಿರಾಸತನಂಥ ಕಾರ್ಯಕ್ರಮ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ನೂರು ಸಂದೇಶ ನೀಡುತ್ತಿದೆ. ಡಾ.ಎಂ.ಮೋಹನ ಆಳ್ವ ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ