ಕೋಟ: ಸಾಲಿಗ್ರಾಮದ ಕಾರ್ಕಡದ ಪಡುಹೋಳಿಯಲ್ಲಿ ಬೆಳಗ್ಗೆ ಪತಿ ಪತ್ನಿ ಇರ್ವರ ಜಗಳ ಪತ್ನಿಯ ಸಾವಿನೊಂದಿಗೆ ಅಂತ್ಯಗೊಂಡಿದೆ.
ಸಾಲಿಗ್ರಾಮ ಪರಿಸರದಲ್ಲಿ ಬಾಣಸಿಗನಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಸ್ತಾನ ಗುಂಡ್ಮಿ ನಿವಾಸಿ ಕಿರಣ್ ಉಪಾಧ್ಯಾಯ(35) ಹಾಗೂ ಬೀದರ್ ದೊಣಗಪುರ ಮೂಲದ ಜಯಶ್ರೀ(31) 9 ತಿಂಗಳ ಹಿಂದೆ ವಿವಾಹವಾಗಿದ್ದರು. ಮೂರು ತಿಂಗಳಿಂದ ಸಾಲಿಗ್ರಾಮ ಕಾರ್ಕಡ ಪಡುಹೋಳಿ ಅಂಗನವಾಡಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಸ್ಥಳೀಯರು ಉಲ್ಲೇಖಿಸುವಂತೆ ಪತ್ನಿ ಜಯಶ್ರೀಗೆ ವಿಪರೀತ ಮೊಬೈಲ್ ರೀಲ್ಸ್ ಹಾಗೂ ಆನ್‌ಲೈನ್‌ನಲ್ಲಿ ಕಾಲಕಳೆಯುತ್ತಿದ್ದರು. ಇದರಿಂದಾಗಿ ಪ್ರತಿದಿನ ಪತಿ ಪತ್ನಿ ನಡುವೆ ಜಗಳ ನಡೆಯುತ್ತಿದ್ದು, ಜಗಳ ತಾರಕಕ್ಕೇರಿ ಪತಿ ಪತ್ನಿಗೆ ಕತ್ತಿಯಿಂದ ಹಲ್ಲೆ ನಡೆಸಿದಾಗ ಪತ್ನಿ ಜಯಶ್ರೀ ತಲೆಗೆ ಗಂಭೀರ ಗಾಯಗೊಂಡು ಉಡುಪಿ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೋಟ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪತ್ನಿ ತಾರಸಿಯಿಂದ ಬಿದ್ದು ಗಾಯಗೊಂಡು ಮೃತಪಟ್ಟಿದ್ದಾಳೆ ಎಂದು ಆರೋಪಿ ಕಿರಣ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ನಿಜವಾದ ಕಾರಣ ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಜಯಶ್ರೀ ಮೃತ ದೇಹವನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.