ಜಿಲ್ಲೆ

ಪತ್ನಿಗೆ ಭಯೋತ್ಪಾದಕರ ಸಂಪರ್ಕ?!; ಪತಿಯಿಂದಲೇ ಪೊಲೀಸರಿಗೆ ದೂರು, ಈ ಮಧ್ಯೆ ಪತ್ನಿ ನಾಪತ್ತೆ!

ಮಂಗಳೂರು: ಪತ್ನಿಗೆ ಭಯೋತ್ಪಾದಕರ ಜತೆ ಸಂಪರ್ಕ ಇದೆ ಎಂದು ಪತಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮಧ್ಯೆ ಪತ್ನಿ ನಾಪತ್ತೆಯಾಗಿದ್ದರೆ, ಮತ್ತೊಂದೆಡೆ ಮುಸ್ಲಿಂ ವ್ಯಕ್ತಿಯೊಬ್ಬನಿಂದ ಪತಿಗೆ ಬೆದರಿಕೆ ಕರೆ ಕೂಡ ಬಂದಿದೆ.

ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿ ಚಿದಾನಂದ ಎಂಬವರು ಪತ್ನಿ ಆರ್. ರಾಜಿ ಎಂಬಾಕೆಯ ವಿರುದ್ಧ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನಾವಣೆಗೆ ದೂರು ನೀಡಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ 11 ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಒಂದು ವರ್ಷದಿಂದ ದುಬೈನಲ್ಲಿರುವ ಪಾಕಿಸ್ತಾನದ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಅಲ್ಲಿ ಆಯಾ ಕೆಲಸ ಮಾಡುತ್ತಿದ್ದ ಪತ್ನಿ ಇದೇ ಜುಲೈ 21ರಂದು ನೆರಿಯಗೆ ಬಂದಿದ್ದು, ದುಬೈಗೆ ವಾಪಸ್ ಹೊರಡುವಾಗ ತನ್ನೊಂದಿಗೆ 12 ವರ್ಷದ ಮಗಳನ್ನೂ ಕಳುಹಿಸಿಕೊಡುವಂತೆ ಹೇಳಿದ್ದಳು ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.

ಮಗಳನ್ನು ಕಳುಹಿಸಿಕೊಡಲು ಒಪ್ಪದಿದ್ದಾಗ ಪತ್ನಿ ಬೆದರಿಕೆಯನ್ನೂ ಹಾಕಿದ್ದಾಳೆ. ಮಗಳನ್ನು ಜತೆಗೆ ಕಳುಹಿಸದಿದ್ದರೆ ತನ್ನ ಸಂಪರ್ಕದಲ್ಲಿರುವ ಉಗ್ರಗಾಮಿ ಸಂಘಟನೆಗಳಿಗೆ ಹೇಳುವುದಾಗಿ ಹೆದರಿಸಿದ್ದಾಳೆ. ಅದಾಗ್ಯೂ ಪತಿ ಒಪ್ಪದಿದ್ದಾಗ ಪತ್ನಿ ರಾತ್ರಿ ಮನೆಯಿಂದ ನಾಪತ್ತೆ ಆಗಿದ್ದಾಳೆ. ಆಕೆ ನಾಪತ್ತೆಯಾದ ಬಳಿಕ ಲಕ್ಷದ್ವೀಪದ ಮೊಹಮ್ಮದ್ ಖಾಸಿಂ ಎಂಬಾತ ಕರೆ ಮಾಡಿದ್ದು, ಪತ್ನಿ ಮತ್ತು ಪುತ್ರಿಯನ್ನು ಕೇರಳದ ಮಲಪ್ಪುರಂಗೆ ಕರೆತರುವಂತೆ ಬೆದರಿಕೆ ಹಾಕಿದ್ದಾನೆ. ಪತ್ನಿಯ ಹಿಂದಿರುವ ಉಗ್ರ ಸಂಘಟನೆ ಕುರಿತಂತೆ ತನಿಖೆ ನಡೆಸುವಂತೆ ಪೊಲೀಸರಿಗೆ ಚಿದಾನಂದ್ ದೂರು ನೀಡಿದ್ದಾರೆ.