ಪೊಲೀಸ್ ಠಾಣೆ ಮುಂದೆಯೇ ಗಂಡ-ಹೆಂಡಿರ ಕಡೆಯವರ ಜಗಳ 
ಜಿಲ್ಲೆ

ಜಗಳ ಮಾಡ್ಕೊಂಡು ಪೊಲೀಸ್ ಠಾಣೆಗೆ ಬಂದಿದ್ರು ದಂಪತಿ; ಎರಡೂ ಕಡೆಯವ್ರು ಅಲ್ಲೂ ಬಡಿದಾಡಿಕೊಂಡ್ರು!

ಕೋಲಾರ: ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆಯೇ ಇದೆ. ಆದರೆ ಇಲ್ಲೊಂದು ಗಂಡ-ಹೆಂಡತಿಯ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ನಿಂತಿಲ್ಲ. ಬದಲಿಗೆ ಎರಡೂ ಕಡೆಯವರು ಪೊಲೀಸ್ ಠಾಣೆ ಆವರಣದಲ್ಲೂ ಬಡಿದಾಡಿಕೊಂಡಿದ್ದಾರೆ.

ಬೆಂಗಳೂರಿನ ವೈಟ್​​ಫೀಲ್ಡ್ ಬಳಿಯ ವಿಜಯನಗರ ನಿವಾಸಿಯಾಗಿರುವ ಪತಿ, ಕೋಲಾರದ ಇದ್ರಿಸ್ ಶಾ ನಗರ ನಿವಾಸಿಯನ್ನು ಮದುವೆಯಾಗಿದ್ದರು. ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಯ ಮಧ್ಯೆ ಇತ್ತೀಚೆಗೆ ಬೇರೆ ಮನೆ ಮಾಡುವ ವಿಚಾರವಾಗಿ ಜಗಳ ಆಗುತ್ತಿತ್ತು.

ಇದೇ ಗಲಾಟೆಗೆ ಸಂಬಂಧಿಸಿದಂತೆ ಇಬ್ಬರೂ ಕೋಲಾರ ಮಹಿಳಾ ಠಾಣೆಗೆ ದೂರು-ಪ್ರತಿದೂರು ನೀಡಲು ಬಂದಿದ್ದರು. ಜೊತೆಗೆ ಎರಡೂ ಇಬ್ಬರ ಸಂಬಂಧಿಕರು ಕೂಡ ಠಾಣೆ ಬಳಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಎರಡು ಕಡೆಯವರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಅದು ಗುಂಪುಘರ್ಷಣೆಗೂ ತಿರುಗಿದೆ. ಪೊಲೀಸರು ಗಲಾಟೆಯನ್ನು ನಿಯಂತ್ರಿಸಿ ಎಲ್ಲರನ್ನೂ ಠಾಣೆ ಒಳಗೆ ಕರೆಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.