ಜಿಲ್ಲೆ

ಅಯೋಧ್ಯೆಯಲ್ಲಿ ಭೀಕರ ರಸ್ತೆ ಅಪಘಾತ; ಕಲಬುರಗಿ ಮೂಲದ ಮೂವರು ಭಕ್ತರು ಸಾವು

ಅಯೋಧ್ಯೆ: ಲಾರಿ ಹಾಗೂ ಟೆಂಪೋ ಟ್ರಾವಲರ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಲಬುರಗಿ ಮೂಲದ ಮೂವರು ಭಕ್ತರು ಮೃತಪಟ್ಟು, 14 ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರೇಶದ ಅಯೋಧ್ಯೆಯಲ್ಲಿ ನಡೆದಿದೆ.

ಮೃತರನ್ನು ಕಲಬುರಗಿ ಮೂಲದ ಶಿವರಾಜ್, ಕಾಶಿನಾಥ್ ಹಾಗೂ ತಂಗೆಮ್ಮ  ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ 14ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಅಯೋಧ್ಯೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಆಸ್ಪತ್ರೆಯ ತುರ್ತು ವೈದ್ಯಾಧಿಕಾರಿ ಆಶಿಶ್ ಪಾಠಕ್, ಕಲಬುರಗಿ ಮೂಲದ ಒಂದೇ ಕುಟುಂಬದ 22 ಮಂದಿ ಕಾಶಿ ವಿಶ್ವಾನಾಥನ ದರ್ಶನ ಪಡೆದು ಬಳಿಕ ಅಯೋಧ್ಯೆಯಲ್ಲಿರುವ ರಾಮಲಲ್ಲಾ ನೋಡಲು ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಸುಗ್ಲಾಬಾಯಿ, ಅನುರಪ್ಪ, ರಾಜಾರಾಂ, ತಾರಾವತಿ, ಪ್ರೀತಿ, ಶಿವಲೀಲಾ, ಚಂದ್ರಕಾಂತ, ಇಂದು, ಚಂದ್ರಮ್ಮ, ಮಹದೇವ್ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ಆಶಿಶ್ ಪಾಠಕ್ ತಿಳಿಸಿದ್ದಾರೆ.