ಪಡುಬಿದ್ರಿ: ಕಲ್ಲು ಮತ್ತು ಶಿಲೆಯಿಂದ ನಿರ್ಮಿಸಿದ ಮಂದಿರ ದೊಡ್ಡದಲ್ಲ, ಭಕ್ತಿಯಿಂದ ನಿರ್ಮಿಸಿದ ಮಂದಿರವೇ ನಿಜವಾದ ಮಂದಿರ. ಅದುವೇ ಭಾರತದ ಇತಿಹಾಸ ಆಗುತ್ತದೆ. ಎಲ್ಲರೂ ಶ್ರದ್ಧೆಯಿಂದ ಅಮ್ಮನ ಹೆಸರು ಬರೆದು ಪ್ರಾರ್ಥಿಸಿ ಪುಸ್ತಕ ಅರ್ಪಿಸಿದಾಗ ಭಾವನಾತ್ಮಕ ಸಂಬಂಧ ಉಂಟಾಗುತ್ತದೆ ಎಂದು ಹುಕ್ಕೇರಿಯ ಶ್ರೀ ಗುರು ಶಾಂತೇಶ್ವರಿ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುಣೆ ಉದ್ಯಮಿ ನಾರಾಯಣ ಶೆಟ್ಟಿ ಎರ್ಮಾಳು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಶೆಟ್ಟಿ, ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉದಯ ಸುಂದರ್ ಶೆಟ್ಟಿ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶೆಟ್ಟಿಗಾರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ್ ಶೆಟ್ಟಿ, ಸದಸ್ಯ ಮಾಧವ ಆರ್.ಪಾಲನ್ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಪಕ್ಕಳ ಮುಂಬೈ ಹಾಗೂ ದಾಮೋದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ಉಚ್ಚಿಲದ ನಟೇಶ ನೃತ್ಯನಿಕೇತನ ವಿದುಷಿ ಮಂಗಳಾ ಕಿಶೋರ್ ದೇವಾಡಿಗ ಮತ್ತು ಬಳಗದಿಂದ ನೃತ್ಯ ವೈಭವ, ತೋನ್ಸೆ ಪುಷ್ಕಳ ಕುಮಾರ್ ಮತ್ತು ಬಳಗದಿಂದ ಭಕ್ತಿ ನಾಮಾಮೃತಂ ಹಾಗೂ ಜಗದೀಶ್ ಪುತ್ತೂರು ಬಳಗದಿಂದ ಭಕ್ತ ರಸಮಂಜರಿ ಕಾರ್ಯಕ್ರಮ ನಡೆಯಿತು.