

ವಿಜಯವಾಣಿ ಸುದ್ದಿಜಾಲ ಬೈಂದೂರು
ಅತ್ಯಾಧುನಿಕ ಸೌಲಭ್ಯವು ಕೊಂಕಣ ರೈಲ್ವೆ ಮೂಲಕ ಬೈಂದೂರು ಮತ್ತು ತಾಲೂಕಿನ ವಿವಿಧ ಪ್ರಮುಖ ಪ್ರವಾಸಿ ಹಾಗೂ ಆಧ್ಯಾತ್ಮಿಕ ಕೆಂದ್ರಕ್ಕೆ ಆಗಮಿಸುವ ಪ್ರಯಾಣಿಕರ ಪ್ರಯಾಣದ ಅನುಭವ ಹೆಚ್ಚಿಸುವ ಪ್ರಯತ್ನದ ಭಾಗವಾಗಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಕೊಂಕಣ ರೈಲ್ವೆ ನಿಗಮವು ಬೈಂದೂರಿನ ಮೂಕಾಂಬಿಕಾ ರೋಡ್ ನಿಲ್ದಾಣದ ಪ್ಲಾೃಟ್ ಫಾರ್ಮ್‌ನಲ್ಲಿ ನಿರ್ಮಿಸಿದ ಕಾರ್ಯನಿರ್ವಾಹಕ ವಿಶ್ರಾಂತಿ ಕೊಠಡಿ(ಎಕ್ಸಿಕ್ಯೂಟಿವ್ ಲಾಂಜ್)ಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕೊಂಕಣ ರೈಲ್ವೆ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ(ಸಿಎಂಡಿ) ಸಂತೋಷ್ ಕುಮಾರ್ ಝಾ, ಕಾರವಾರ ಪ್ರಾದೇಶಿಕ ರೈಲ್ವೆಯ ಪ್ರಬಂಧಕಿ ಆಶಾ ಶೆಟ್ಟಿ, ರೈಲ್ವೆಯ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ದಿಲೀಪ್ ಭಟ್, ಮುಂಬೈ ಉಪ ಮುಖ್ಯ ವಾಣಿಜ್ಯ ಪ್ರಬಂಧಕ ಆರ್.ಡಿ.ಗೊಲಾಬ್, ಕೊಂಕಣ ರೈಲ್ವೆ ಕಾರವಾರ ಉಪ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್, ಪ್ರಾಂತಿಯ ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರ್ ರಾಹುಲ್ ಬಾಡ್ಕರ್, ಹಿರಿಯ ಪ್ರಾಂತೀಯ ಇಂಜಿನಿಯರ್ ಬಿ.ಎಸ್.ನಡೈ, ಕೊಂಕಣ ರೈಲ್ವೆ ಮಂಗಳೂರಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ, ಸಹಾಯಕ ವಾಣಿಜ್ಯ ಪ್ರಬಂಧಕ ಜಿ.ಡಿ.ಮೀನಾ, ರೈಲ್ವೆ ಯಾತ್ರಿ ಸಂಘದ ಕುಂಜಾಲು ವೆಂಕಟೇಶ ಕಿಣಿ ಮುಂತಾದವರು ಉಪಸ್ಥಿತರಿದ್ದರು.
ಬೈಂದೂರು ಮೂಕಾಂಬಿಕಾ ರೋಡ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮರವಂತೆ, ಒತ್ತಿನೆಣೆ ಸಹಿತ ಹಲವು ಧಾರ್ಮಿಕ ಹಾಗೂ ನೈಸರ್ಗಿಕ ಸೌಂದರ್ಯದ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಅವರ ಅನುಕೂಲಕ್ಕೆ ಈ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ. ಇದು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಸೋಫಾ, ಉಚಿತ ವೈ-ಫೈ, ಚಾರ್ಜಿಂಗ್ ಪಾಯಿಂಟ್, ಪತ್ರಿಕೆಗಳು ಮತ್ತು ನಿಯತಕಾಲಿಕಗಳೊಂದಿಗೆ ಓದುವ ಗ್ಯಾಲರಿ ಮತ್ತು ಮನರಂಜನೆಗಾಗಿ ಟಿವಿ ವ್ಯವಸ್ಥೆ ಕೂಡ ಇದೆ. ಪ್ರಯಾಣಿಕರಿಗೆ ಎಲ್ಲ ಸಮಯದಲ್ಲೂ ಕೆಫೆ ತೆರೆದಿರುತ್ತದೆ. ಈ ಕಾರ್ಯನಿರ್ವಾಹಕ ವಿಶ್ರಾಂತಿ ಗೃಹವು ಗಂಟೆಗೆ 50 ರೂ.ಗಳ ದರದಲ್ಲಿ ಲಭ್ಯವಿದೆ.