ಜಿಲ್ಲೆ

ಪಾಪೆತ್ತಡ್ಕದಲ್ಲಿ ಗುಡ್ಡ ಕುಸಿತ, ಮನೆಗಳಿಗೆ ಹಾನಿ

ಪುತ್ತೂರು ಗ್ರಾಮಾಂತರ: ಮುಂಡೂರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ಧರೆ ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆೆ.

ಗುಡ್ಡದ ಮೇಲೆ ಇರುವ ನಿರುಪಯುಕ್ತ ನೀರಿನ ಟ್ಯಾಂಕ್ ತನಕವೂ ಗುಡ್ಡ ಕುಸಿದಿದ್ದು, ಟ್ಯಾಂಕ್ ಕುಸಿದು ಬಿದ್ದಲ್ಲಿ ಅಲ್ಲಿಗೆ ನಾಲ್ಕೈದು ಮನೆಗಳಿಗೆ ಅಪಾಯವಾಗುವ ಸಂಭವ ಎದುರಾಗಿದೆ.

ಮುಂಡೂರು ಗ್ರಾಮದ ಪಾಪೆತ್ತಡ್ಕ ನಿವಾಸಿಗಳಾದ ಶರೀಫ್ ಮತ್ತು ಅಬ್ದುಲ್ ಲತೀಫ್ ಎಂಬುವರ ಮನೆಗಳ ಪಕ್ಕದ ಗುಡ್ಡ ಶುಕ್ರವಾರ ರಾತ್ರಿ ಕುಸಿದಿದೆ. ಗುಡ್ಡದ ಮಣ್ಣು ಕುಸಿದು ಬಿದ್ದ ಪರಿಣಾಮವಾಗಿ ಶರೀಫ್ ಅವರ ಮನೆಗೆ ಹೆಚ್ಚಿನ ಹಾನಿಯಾಗಿದ್ದು, ಮನೆಯ ಗೋಡೆ ಕುಸಿದಿದ್ದು, ಮನೆಯ ಮಾಡು ಹಾನಿಗೊಂಡಿದೆ. ಅಬ್ದುಲ್ ಲತೀಫ್ ಮನೆಗೂ ಹಾನಿಯಾಗಿದೆ.

ಸ್ಥಳಕ್ಕೆ ಮುಂಡೂರು ಪಿಡಿಒ ಮನ್ಮಥ, ಕಂದಾಯ ನಿರೀಕ್ಷಕ ಗೋಪಾಲ್, ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಂಡೂರು ಗ್ರಾಮದ ಪಾಪೆತ್ತಡ್ಕ ನಿವಾಸಿ ಅಬ್ದುಲ್ ಲತೀಫ್ ಮನೆ ಪಕ್ಕದ ಗುಡ್ಡ ಕುಸಿದು ಮನೆಗೆ ಹಾನಿಯಾಗಿರುವುದು.

ನಿರುಪಯುಕ್ತ ಟ್ಯಾಂಕ್ ತೆರವಿಗೆ ಆಗ್ರಹ

ಹಳೆಯದಾದ ನಿರುಪಯುಕ್ತ ನೀರಿನ ಟ್ಯಾಂಕ್ ತೆರವುಗೊಳಿಸುವಂತೆ ಅಲ್ಲಿನ ಸ್ಥಳೀಯರು ಕಳೆದ ಕೆಲ ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಸಂಬಂಧಪಟ್ಟವರು ಈ ತನಕ ಕ್ರಮಕೈಗೊಂಡಿಲ್ಲ. ಇದೀಗ ಟ್ಯಾಂಕ್ ಗುಡ್ಡ ಕುಸಿತದಿಂದಾಗಿ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ತಕ್ಷಣ ಟ್ಯಾಂಕನ್ನು ತೆರವುಗೊಳಿಸಿ ಅಪಾಯ ತಪ್ಪಿಸುವಂತೆ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಶಾಸಕರಿಗೆ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಿದ್ದು, ತಕ್ಷಣ ತೆರವುಗೊಳಿಸುವಂತೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.