ಬೆಂಗಳೂರು: ಬಿಬಿಎಂಪಿ ವಾರ್ಡ್ ಮರು ವಿಂಗಡಣೆ, ಮೀಸಲು ಪಟ್ಟಿಯನ್ನು ಮಾ.31ರೊಳಗೆ ಒದಗಿಸದಿದ್ದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ದಿನಕ್ಕೆ 5 ಲಕ್ಷ ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಬಿಬಿಎಂಪಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ಪಟ್ಟಿ ನೀಡಲು ನಿರ್ದೇಶಿಸುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಾರ್ಡ್ ಮರುವಿಂಗಡಣೆಯ ಕರಡು ಪಟ್ಟಿಯನ್ನು ಮಾ. 2ಕ್ಕೆ ಪ್ರಕಟಿಸಲಾಗಿದೆ. ಮಾ.18ಕ್ಕೆ ಹದಿನೈದು ದಿನ ಆಗಲಿದ್ದು, ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರೀತಿ ಮೀಸಲು ನಿಗದಿ ಪ್ರಕ್ರಿಯೆ ಸಹ ಕೈಗೊಳ್ಳಲಾಗುವುದು. ಇದಕ್ಕಾಗಿ
ಒಂದು ವಾರ ಕಾಲಾವಕಾಶ ಬೇಕು. ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ನಿಗದಿ ಕಾರ್ಯ ಪ್ರಗತಿಯಲ್ಲಿದ್ದು, ಸಭೆಗಳನ್ನೂ ಸಹ ನಡೆಸಲಾಗಿದೆ ಎಂದು ಸರ್ಕಾರದ ಪರ ವಕೀಲರಾದ ವಿ. ಶ್ರೀನಿಧಿ ಹೇಳಿದರು. ಸರ್ಕಾರ ಮತ್ತೆ ಕಾಲಾವಕಾಶ ಕೇಳುತ್ತಿದ್ದು, ಮಹತ್ವದ ವಿಚಾರದಲ್ಲಿ ಇಂತಹ ಧೋರಣೆ ಸರಿಯಲ್ಲ. ಗರಿಷ್ಠ ಕಾಲಮಿತಿ ನಿಗದಿ ಬಗ್ಗೆ ಮಾ.13ಕ್ಕೆ ಪ್ರಮಾಣ ಪತ್ರ ಸಲ್ಲಿಸುವಂತೆ ಕಳೆದ ವಿಚಾರಣೆ ವೇಳೆ ಹೇಳಲಾಗಿತ್ತು. ಮಾ.31ರೊಳಗೆ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ಪಟ್ಟಿ ಅಂತಿಮಗೊಳಿಸಿ ಆಯೋಗಕ್ಕೆ ಸಲ್ಲಿಸಬೇಕು. ಇಲ್ಲದಿದ್ದರೆ ಮಾ.31ರ ಬಳಿಕ ದಿನಕ್ಕೆ 5 ಲಕ್ಷ ರೂ. ದಂಡವನ್ನು ಚುನಾವಣಾ ಆಯೋಗಕ್ಕೆ ಪಾವತಿಸುವಂತೆ ಆದೇಶ ಮಾಡಬೇಕಾಗುತ್ತದೆ ಎಂದು ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.
ವಿಚಾರಣೆ ಮುಂದೂಡಿಕೆ: ಚುನಾವಣಾ ಆಯೋಗಕ್ಕೆ ಭಾರಿ ಮೊತ್ತದ ದಂಡ ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಇದೊಂದು ಸೂಕ್ತ ಪ್ರಕರಣ. ಆದರೂ, ಸರ್ಕಾರದ ಪರ ವಕೀಲರು ಕಾಲಾವಕಾಶ ಕೇಳುತ್ತಿರುವುದಿಂದ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ಪಟ್ಟಿಯನ್ನು ಯಾವ ಕಾಲಮಿತಿಯೊಳಗೆ ಆಯೋಗಕ್ಕೆ ಸಲ್ಲಿಸಲಾಗುವುದು ಎಂಬ ಬಗ್ಗೆ ಮಾ.20ಕ್ಕೆ ತಿಳಿಸುವಂತೆ ಸರ್ಕಾರಕ್ಕೆ ಗಡುವು ನೀಡಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.