ಜಿಲ್ಲೆ

ಪ್ರತಿ ಚುನಾವಣೆಯಲ್ಲೂ ನಮ್ಮ ಹಿಂದಿರುವ ದೇವರಿದು!; ಲಿಂಬೆಹಣ್ಣು ಉರುಳಿಸಿ ರಹಸ್ಯ ಹೇಳಿದ ರೇವಣ್ಣ

ಹಾಸನ: ಮಾಜಿ ಸಚಿವ ಎಚ್​.ಡಿ.ರೇವಣ್ಣ ಹಾಗೂ ಲಿಂಬೆಹಣ್ಣಿಗೂ ಅವಿನಾಭಾವ ಸಂಬಂಧ ಎಂದರೂ ತಪ್ಪೇನಲ್ಲ. ಬಹುತೇಕ ಎಲ್ಲ ಸಂದರ್ಭದಲ್ಲೂ ಅವರ ಬಳಿ ಲಿಂಬೆಹಣ್ಣು ಇದ್ದೇ ಇರುತ್ತದೆ. ಇಂದು ನಡೆದ ಸಮಾರಂಭವೊಂದರಲ್ಲೂ ಒಂದಲ್ಲ ಹಲವು ಲಿಂಬೆಹಣ್ಣುಗಳಿದ್ದು, ಅವುಗಳನ್ನು ಉರುಳಿಸಿದ ರೇವಣ್ಣ, ರಹಸ್ಯವೊಂದನ್ನು ಹೇಳಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ನಾಗರಹಳ್ಳಿ ತಿರುಮಲ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್​.ಡಿ. ರೇವಣ್ಣ, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸೇರಿ ಹಲವರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಶಾಸಕ ಶಿವಲಿಂಗೇಗೌಡರು ರೇವಣ್ಣಗೆ ಒಂದಷ್ಟು ಲಿಂಬೆಹಣ್ಣುಗಳನ್ನು ನೀಡಿದ್ದಾರೆ. ಆ ಲಿಂಬೆಹಣ್ಣುಗಳನ್ನು ರೇವಣ್ಣ ಒಂದೊಂದಾಗಿ ಅಭಿಮಾನಿಗಳತ್ತ ಎಸೆದಿದ್ದು, ಅದನ್ನು ಅಭಿಮಾನಿಗಳು ಸಂಭ್ರಮದಿಂದಲೇ ಸ್ವೀಕರಿಸಿದ್ದಾರೆ.

ಇನ್ನು ಚುನಾವಣೆ ಸಂದರ್ಭದಲ್ಲಿ ತಮ್ಮ ಹಿಂದಿರುವ ದೇವರ ಕುರಿತು ಕೂಡ ರೇವಣ್ಣ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿಯನ್ನು ನಂಬಿ ಕೆಟ್ಟವರಿಲ್ಲ. ಹಿಂದೆ ದೇವೇಗೌಡರಿಗೆ ಕಾಂಗ್ರೆಸ್​ನಿಂದ ಟಿಕೆಟ್ ಕೈ ತಪ್ಪಿದಾಗ ಬೆಳಗ್ಗಿನ ಜಾವ ಮೂರು ಗಂಟೆಯಲ್ಲಿ ರಂಗನಾಥ ಸ್ವಾಮಿ ಕನಸಿನಲ್ಲಿ ಬಂದು ಅರ್ಜಿ ಹಾಕು ‌ಅಂತ ಹೇಳಿದ್ದರು.

ರಂಗನಾಥ ಸ್ವಾಮಿ ಆಜ್ಞೆ ನಂತರವೇ ದೇವೇಗೌಡರು ಚುನಾವಣೆಗೆ ನಿಂತು ಗೆದ್ದಿದ್ದು. ಪ್ರತಿ ಚುನಾವಣೆಯಲ್ಲೂ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಅರ್ಜಿಯನ್ನು ಪೂಜಿಸಿ ನಂತರವೇ ಚುನಾವಣೆಗೆ ಹೋಗುವುದು ಪದ್ಧತಿ. ಒಮ್ಮೆ ರಂಗನಾಥ ಸ್ವಾಮಿಗೆ ಅರ್ಜಿ ಇಟ್ಟು ಪೂಜಿಸದೇ ಹೋದಾಗ ಆ ಸಲ ನಾವು ಸೋತೆವು ಎಂದು ರೇವಣ್ಣ ಹೇಳಿದರು.