ರಾಣೆಬೆನ್ನೂರ: ಮಾನಸಿಕ ಖಿನ್ನತೆಗೆ ಒಳಗಾದ ಪದವಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕಾಲೇಜ್‌ನ ಹಿಂಭಾಗದ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಏ. 26ರಂದು ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಪವಿತ್ರಾ ಚನ್ನಬಸಪ್ಪ ತೆಂಬೂರಿ(21) ಮೃತ ವಿದ್ಯಾರ್ಥಿನಿ.
ಇದನ್ನೂ ಓದಿ: ಸಾಂಬಾರ್ಗೆ ಉಪ್ಪು ಹೆಚ್ಚಾಯಿತೆಂದು ಎದೆಗೆ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ!
ಈಕೆ ನಗರದ ಖಾಸಗಿ ಕಾಲೇಜ್‌ನಲ್ಲಿ ಪದವಿ ಓದುತ್ತಿದ್ದಳು. ಕೆಲ ದಿನದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು. ಕಾಲೇಜ್‌ನಲ್ಲಿ ಸ್ನೇಹಿತೆಯರು ಮಾತನಾಡಿಸಿದರೂ ಸಿಡಿಮಿಡಿ ಮಾಡಿಕೊಂಡು ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಏ. 26ರಂದು ಗ್ರಾಮದಿಂದ ಕಾಲೇಜ್‌ಗೆ ಬಂದು ಪ್ರಾಯೋಗಿಕ ಪರೀಕ್ಷೆ ಕೂಡ ಬರೆದಿದ್ದಾಳೆ. ನಂತರ ಕಾಲೇಜ್‌ನ ಹಿಂಭಾಗದ ಬಿಸಿಯೂಟ ತಯಾರಿಸುವ ಕಟ್ಟಡದ ಬಳಿ ತೆರಳಿ ನೇಣು ಬಿಗಿದುಕೊಂಡಿದ್ದಾಳೆ.
ಭಾನುವಾರ ಬೆಳಗ್ಗೆ ಸಿಬ್ಬಂದಿ ಕಟ್ಟಡ ಸ್ವಚ್ಛಗೊಳಿಸುವ ಸಮಯದಲ್ಲಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.