ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಅತ್ಯಂತ ಪ್ರಸಿದ್ಧ ಹಾಗೂ ದಿವ್ಯ ಶಕ್ತಿಪೀಠವಾದ ಹಾಸನಾಂಬಾ ದೇವಿಯ ದರ್ಶನ ಪಡೆಯಲು ಕಾತರದಿಂದ ಕಾಯುತ್ತಿರುವ ಭಕ್ತರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಸಿಹಿಸುದ್ದಿ ನೀಡಿದೆ. ಅಕ್ಟೋಬರ್ 30, 2026 ರಿಂದ ನವೆಂಬರ್ 11, 2026 ರವರೆಗೆ ಜರುಗಲಿರುವ ‘ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವ 2026’ ರ ( Hasanamba Jathra 2026 ) ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಭಕ್ತರ ಸುಲಭ ಸಂಚಾರಕ್ಕಾಗಿ ಕೆಎಸ್ಆರ್ಟಿಸಿಯು ಕರ್ನಾಟಕ ಸಾರಿಗೆ, ಅಶ್ವಮೇಧ ಹಾಗೂ ಐಷಾರಾಮಿ ಐರಾವತ (ವೋಲ್ವೋ) ವಿಶೇಷ ಪ್ಯಾಕೇಜ್ಗಳನ್ನು ಪ್ರಕಟಿಸಿದೆ. ಭಕ್ತಿಯ ಹೆಜ್ಜೆಗೆ ಕೆಎಸ್ಆರ್ಟಿಸಿ ಸದಾ ಜೊತೆಯಾಗಿದ್ದು, ಭಕ್ತರು ಈ ವಿಶೇಷ ಬಸ್ಗಳಲ್ಲಿ ಪ್ರಯಾಣಿಸಿ ದೇವಿಯ ದಿವ್ಯಾನುಭವವನ್ನು ಪಡೆದುಕೊಳ್ಳಬಹುದಾಗಿದೆ.
ಈ ವಿಶೇಷ ಜಾತ್ರಾ ಮಹೋತ್ಸವದ ಪ್ರಯುಕ್ತ ಕೆಎಸ್ಆರ್ಟಿಸಿಯು ಒಟ್ಟು 10 ವಿಶೇಷ ಪ್ರವಾಸ ಮಾರ್ಗಗಳನ್ನು ಸಿದ್ಧಪಡಿಸಿದೆ. ಇದರಲ್ಲಿ ಮಾರ್ಗ 1 ರಿಂದ 8 ರವರೆಗಿನ ಬಸ್ಗಳು ಹಾಸನ ನಗರ ಬಸ್ ನಿಲ್ದಾಣದಿಂದ ಅಧಿಕೃತವಾಗಿ ನಿರ್ಗಮಿಸಲಿವೆ. ಪ್ರಥಮ ಮಾರ್ಗದಲ್ಲಿ ಹಾಸನಾಂಬೆ ಹಾಗೂ ಸಿದ್ಧೇಶ್ವರ ದೇವಸ್ಥಾನದ ದರ್ಶನ, ದೇವಿಗರೆ ಕಲ್ಯಾಣಿ ಮತ್ತು ಕೆಂಚಮ್ಮನ ಹೊಸಕೋಟೆ ದೇವಸ್ಥಾನವನ್ನು ಒಳಗೊಂಡಿದ್ದು, ಬೆಳಗ್ಗೆ 08:00 ಗಂಟೆಗೆ ಹೊರಡುವ ಈ 90 ಕಿ.ಮೀ ಪ್ರಯಾಣಕ್ಕೆ ಟಿಕೆಟ್ ಮೊತ್ತ 1,400 ರೂ. ನಿಗದಿಪಡಿಸಲಾಗಿದೆ (ಇದು ಬುಧವಾರ, ಶುಕ್ರವಾರ ಮತ್ತು ಭಾನುವಾರ ಲಭ್ಯವಿರುತ್ತದೆ).
ಹಾಗೆಯೇ ಮಾರ್ಗ 2 ರಲ್ಲಿ ವಾಟೆಹೋಳೆ ಡ್ಯಾಮ್, ಜನಾರ್ದನಸ್ವಾಮಿ ದೇವಸ್ಥಾನ, ಮರಗಡಿ ಜಲಪಾತ ಹಾಗೂ ಬೆಟ್ಟದ ಭೈರವೇಶ್ವರ ದೇವಸ್ಥಾನದ ಭೇಟಿಗಾಗಿ ಬೆಳಗ್ಗೆ 07:30 ಕ್ಕೆ ಹೊರಡುವ 184 ಕಿ.ಮೀ ಪ್ರಯಾಣದ ಟಿಕೆಟ್ ದರ 500 ರೂ. ನಿಗದಿ ಮಾಡಲಾಗಿದೆ. ಅದೇ ರೀತಿ ಮಾರ್ಗ 3 ರಲ್ಲಿ ಮಂಜರಾಬಾದ್ ಕೋಟೆ, ಮೂಕನಮನೆ ಜಲಪಾತ ಹಾಗೂ ಬಿಸಿಲೆ ಘಾಟ್ ವೀಕ್ಷಣಾ ಕೇಂದ್ರವನ್ನು ಒಳಗೊಂಡ 192 ಕಿ.ಮೀ ಪ್ರಯಾಣಕ್ಕೆ 525 ರೂ. (+ ಬಿಸಿಲೆ ಘಾಟ್ ಪ್ರವೇಶ ಶುಲ್ಕ) ಹಾಗೂ ಮಾರ್ಗ 4 ರಲ್ಲಿ ಯಗಚಿ ಜಲಸಾಹಸ ಕ್ರೀಡೆ (ಪ್ರತ್ಯೇಕ ಶುಲ್ಕವಿದೆ), ಶ್ರೀ ಚನ್ನಕೇಶವ ದೇವಸ್ಥಾನ (ಬೇಲೂರು), ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಹಳೇಬೀಡು ಹಾಗೂ ವರದರಾಜಸ್ವಾಮಿ ದೇವಸ್ಥಾನ (ಕೊಂಡಜ್ಜಿ) ಒಳಗೊಂಡ 117 ಕಿ.ಮೀ ಪ್ರವಾಸಕ್ಕೆ 375 ರೂ. ದರ ನಿಗದಿಪಡಿಸಲಾಗಿದೆ.
ಇನ್ನು ಮಾರ್ಗ 5 ರಡಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ (ನುಗ್ಗೇಹಳ್ಳಿ), ಶ್ರವಣಬೆಳಗೊಳ, ವಿಂಧ್ಯಗಿರಿ, ಚಂದ್ರಗಿರಿ ಮತ್ತು ಬೆಲಸಿಂಗ ಪಾರ್ಕ್ ಒಳಗೊಂಡ 132 ಕಿ.ಮೀ ಪ್ರಯಾಣಕ್ಕೆ 400 ರೂ. (ಪಾರ್ಕ್ ಪ್ರವೇಶ ಶುಲ್ಕ ಪ್ರತ್ಯೇಕ) ಹಾಗೂ ಮಾರ್ಗ 6 ರಲ್ಲಿ ಬೂತೇಶ್ವರ ದೇವಾಲಯ (ಕೊರಮಂಗ), ಕೇಶವ ಮತ್ತು ಸೋಮೇಶ್ವರ ದೇವಾಲಯ, ಮಾಲೇಕಲ್ಲು ತಿರುಪತಿ, ಜೇನುಕಲ್ಲು ಸಿದ್ಧೇಶ್ವರ ಬೆಟ್ಟ, ಅರಸೀಕೆರೆ ಮತ್ತು ಶಾಂತಿಗ್ರಾಮ ಒಳಗೊಂಡ 134 ಕಿ.ಮೀ ಪ್ರವಾಸಕ್ಕೆ 400 ರೂ. ಶುಲ್ಕವಿರಲಿದೆ.
ಉಳಿದಂತೆ ಮಾರ್ಗ 7 ರಲ್ಲಿ ಹಾಲುವಾಗಿಲು ಕಟ್ಟು, ಶೆಟ್ಟಿಹಳ್ಳಿ ಚರ್ಚ್, ಶ್ರೀ ರಂಗನಾಥಸ್ವಾಮಿ ದೇವಾಲಯ (ಕೋನಾಪುರ), ಹೇಮಾವತಿ ಜಲಾಶಯ (ಗೊರೂರು) ಹಾಗೂ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ (ರಾಮನಾಥಪುರ) ಒಳಗೊಂಡ 143 ಕಿ.ಮೀ ಪ್ರಯಾಣಕ್ಕೆ 500 ರೂ. ಹಾಗೂ ಮಾರ್ಗ 8 ರಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ (ಹೊಳೆನರಸೀಪುರ), ಶ್ರೀ ಚನ್ನಕೇಶವ ದೇವಸ್ಥಾನ (ಅರಕರೆ), ಶ್ರೀ ರಂಗನಾಥಸ್ವಾಮಿ ದೇವಾಲಯ (ಬೆಟ್ಟದಪುರ), ಬಾಣಾವರ ಕೋಟೆ ಮತ್ತು ಶ್ರೀ ರಂಗನಾಥಸ್ವಾಮಿ ದೇವಾಲಯ (ಬಿಳಿಕಲ್ಲು) ಒಳಗೊಂಡ 181 ಕಿ.ಮೀ ಪ್ರವಾಸದ ಟಿಕೆಟ್ ದರ 500 ರೂ. ಎಂದು ಕೆಎಸ್ಆರ್ಟಿಸಿ ತಿಳಿಸಿದೆ. ಈ ಎಲ್ಲಾ ಮಾರ್ಗಗಳ ಬಸ್ಗಳು ಬೆಳಗ್ಗೆ 07:30 ಕ್ಕೆ ಹೊರಡಲಿದ್ದು, ಆಯಾ ಸ್ಥಳಗಳಲ್ಲಿ ದಾಸೋಹದ ವ್ಯವಸ್ಥೆಯೂ ಲಭ್ಯವಿರಲಿದೆ.
ಕೇವಲ ಹಾಸನ ಸುತ್ತಮುತ್ತ ಮಾತ್ರವಲ್ಲದೆ, ರಾಜಧಾನಿ ಬೆಂಗಳೂರು ಹಾಗೂ ಮೈಸೂರಿನಿಂದಲೂ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 06:00 ಗಂಟೆಗೆ ಹೊರಡುವ ಒಟ್ಟು 380 ಕಿ.ಮೀ ಪ್ರಯಾಣದ ಅಶ್ವಮೇಧ ಬಸ್ಗೆ 2,000 ರೂ. ಹಾಗೂ ಐಷಾರಾಮಿ ವೋಲ್ವೋ ಬಸ್ಗೆ 2,500 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಹಾಗೆಯೇ ಮೈಸೂರು ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 06:00 ಗಂಟೆಗೆ ಹೊರಡುವ 250 ಕಿ.ಮೀ ಪ್ರಯಾಣದ ಅಶ್ವಮೇಧ ಬಸ್ಗೆ 1,600 ರೂ. ಮತ್ತು ವೋಲ್ವೋ ಬಸ್ಗೆ 2,000 ರೂ. ದರವಿರುತ್ತದೆ. ಈ ವಿಶೇಷ ಬಸ್ಗಳು ಹಾಸನಾಂಬೆ ದರ್ಶನ ಮುಗಿಸಿ ಸಂಜೆ ಸುಮಾರು 8 ಗಂಟೆಗೆ ವಾಪಸ್ ಆಗುವ ಸಮಯವನ್ನು ಹೊಂದಿವೆ.
ಈ ಧಾರ್ಮಿಕ ಪ್ರವಾಸದ ಕುರಿತು ಪ್ರಯಾಣಿಕರಿಗೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಲಾಗಿದ್ದು, ಮಕ್ಕಳಿಗೆ ಪ್ರತ್ಯೇಕ ದರವಿರಲಿದ್ದು, ಊಟ ಮತ್ತು ದೇವಸ್ಥಾನದ ಪ್ರವೇಶ ಶುಲ್ಕ ಪ್ರತ್ಯೇಕವಾಗಿರುತ್ತದೆ. ಅಕ್ಟೋಬರ್ 30, 2026 ರಿಂದ ನವೆಂಬರ್ 11, 2026 ರವರೆಗೆ ಲಭ್ಯವಿರುವ ಈ ಪ್ಯಾಕೇಜ್ ಟೂರ್ ಕುರಿತು ಹೆಚ್ಚಿನ ಹಾಗೂ ನಿಖರ ಮಾಹಿತಿಗಾಗಿ ಭಕ್ತರು KSRTC ಯ ಅಧಿಕೃತ ವೆಬ್ಸೈಟ್ www.ksrtc.in ಅಥವಾ ಹೆಲ್ಪ್ಲೈನ್ ಸಂಖ್ಯೆಗಳಾದ 7760990518, 7760990519, 7760990520 ಹಾಗೂ 7760990523 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.