ಜಿಲ್ಲೆ

ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಶಾರ್ಟ್‌ಸರ್ಕ್ಯೂಟ್‌ಗೆ ಹೊತ್ತಿ ಉರಿದ ಕಾರ್ಖಾನೆ

vijayavani

ಹಾರೋಹಳ್ಳಿ: ಕನಕಪುರ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಬ್ಯಾಟರಿ ತಯಾರಿಕಾ ಸಂಸ್ಥೆ ಶಕ್ತಿ ಇಂಡಸ್ಟ್ರೀಸ್‌ನಲ್ಲಿ ಮಂಗಳವಾರ ಸಂಜೆ ಶಾರ್ಟ್‌ಸರ್ಕ್ಯೂಟ್ ಉಂಟಾಗಿ ಕೋಟ್ಯಂತರ ರೂ. ನಷ್ಟವಾಗಿದೆ.

ಯುಪಿಎಸ್ ಬ್ಯಾಟರಿ ತಯಾರಿಕಾ ಸಾಮಗ್ರಿಗಳು ಮತ್ತು ತಯಾರಾಗಿದ್ದ ಬ್ಯಾಟರಿಗಳು ಸುಟ್ಟು ಕರಕಲಾಗಿವೆ.

ಥರ್ಮಾಕೋಲ್ಗೆ ಮೊದಲು ಬೆಂಕಿ ತಗುಲಿದೆ. ಹೆದರಿದ ಕಾರ್ಮಿಕರು ಕಾರ್ಖಾನೆಯಿಂದ ಹೊರಗೆ ಓಡಿದ್ದಾರೆ. ಸುಮಾರು 60 ಕಾರ್ಮಿಕರು ಕೆಲಸ ಮಾಡುತಿದ್ದು, ಬೆಂಕಿ ಹೊತ್ತಿಕೊಂಡ ಕೆಲವೇ ಗಂಟೆಗಳಲ್ಲಿ ಕಾರ್ಖಾನೆ ಹೊತ್ತಿ ಉರಿದಿದೆ.

ಶಬ್ದಕ್ಕೆ ಬೆಚ್ಚಿದ ಜನ: ಬ್ಯಾಟರಿ ತಯಾರಿಕೆಯಲ್ಲಿ ಬಳಕೆ ಮಾಡುವ ಆಸಿಡ್ ಮತ್ತು ಸಿಲಿಂಡರ್‌ಗಳು ಸಿಡಿದಿದ್ದರಿಂದ ಇದರಿಂದ ಸುತ್ತಲ ಅರ್ಧ ಕಿ.ಮೀ.ವರೆಗೂ ಶಬ್ದ ಜೋರಾಗಿ ಕೇಳಿ ಬರುತ್ತಿತ್ತು. ಇದರಿಂದ ಜನರು ಕೆಲಹೊತ್ತು ಭಯಭೀತರಾಗಿದ್ದರು.

ಕಾರ್ಮಿಕರಿಗೆ ಅತಂತ್ರವಾಗುವ ಭಯ: ಬೆಂಕಿಯ ಕೆನ್ನಾಲಿಗೆಗೆ ಕಾರ್ಖಾನೆ ಭಸ್ಮವಾಗಿದ್ದು, ಕಾರ್ಮಿಕರಿಗೆ ಈಗ ಅತಂತ್ರವಾಗುವ ಭಯ ಕಾಡುತ್ತಿದೆ. ಕಾರ್ಖಾನೆ ಮತ್ತೆ ಎಂದಿನಂತೆ ಕಾರ್ಯ ಆರಂಭಿಸುವವರೆಗೂ ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಹೇಗೆಂಬ ಭಯ ಎದುರಾಗಿದೆ.

ಸ್ಥಳದಲ್ಲಿ ಪೊಲೀಸರ ದಂಡು: ಕಾರ್ಖಾನೆಗೆ ಬೆಂಕಿ ಬಿದ್ದ ವಿಷಯ ತಿಳಿದ ರಾಮನಗರ ಡಿವೈಎಸ್ಪಿ ಪುರುಷೋತ್ತಮ್, ಹಾರೋಹಳ್ಳಿ ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್, ಪಿಎಸ್‌ಐ ಮುರಳಿ, ಕನಕಪುರ ಗ್ರಾಮಾಂತರ ಪಿಎಸ್‌ಐ ಅನಂತರಾಮ್ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.

ತಡವಾಗಿ ಬಂದ ಅಗ್ನಿಶಾಮಕ ದಳ: ಕಾರ್ಖಾನೆ ಬೆಂಕಿ ಬಿದ್ದ ತಕ್ಷಣ ಮಾಹಿತಿ ನೀಡಿದ್ದರೂ ಅಗ್ನಿಶಾಮಕ ವಾಹನಗಳು ತಡವಾಗಿ ಬಂದಿದ್ದರಿಂದ ಕಾರ್ಖಾನೆ ಅರ್ಧದಷ್ಟು ಸುಟ್ಟುಹೋಗಿತ್ತು. 8 ವಾಹನಗಳು ಬೆಂಕಿ ಆರಿಸಿದವು. ಕೋಟ್ಯಂತರ ರೂ.ಸಾಲ ಮಾಡಿ ಕಾರ್ಖಾನೆ ಸ್ಥಾಪನೆ ಮಾಡಿದ್ದು ಈಗ ಎಲ್ಲಿಂದ ಹಣ ತರುವುದು ಎಂದು ಮಾಲೀಕ ನಾಗರಾಜು ಕಣ್ಣೀರು ಹಾಕಿದರು.