ಚಿಕ್ಕಮಗಳೂರು: ನಿಂತಿದ್ದ ಬಸ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ, ತಂತಾನೇ ಚಲನೆ; ನಂತರ ಮುಂದಿದ್ದ ಬಸ್ಗೆ ಡಿಕ್ಕಿ!
- ಹೌದು.. ಇಂಥದ್ದೊಂದು ಅಚ್ಚರಿಯ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ, ಅದೂ ತಡರಾತ್ರಿಯಲ್ಲಿ ಸಂಭವಿಸಿದೆ.
ಶನಿವಾರ ತಡರಾತ್ರಿ ಎರಡೂವರೆ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿಗೆ ಭಾಗಶಃ ಹಾನಿಯಾಗಿದ್ದ ಬಸ್ ಇನ್ನೊಂದು ಬಸ್ಗೆ ಡಿಕ್ಕಿ ಹೊಡೆದು ನಿಂತಿದ್ದ ದೃಶ್ಯವನ್ನು ಭಾನುವಾರ ಬೆಳಗ್ಗೆ ನೋಡಿದ್ದವರಿಗೆ ಇದು ಹೇಗೆ ಸಾಧ್ಯ, ಏನಾಗಿತ್ತು ಎಂಬ ಅಚ್ಚರಿ ಕಾಡಿತ್ತು.
ಬಳಿಕ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಅದು ನಡೆದಿದ್ದೇನು ಎಂಬುದರ ಕುರಿತು ಒಂದಷ್ಟು ಮಾಹಿತಿ ನೀಡಿದ್ದರೂ ನಿಜಕ್ಕೂ ಆಗಿದ್ದೇನು ಎಂಬ ಕುತೂಹಲ ಇನ್ನೂ ಹಾಗೇ ಉಳಿದಿದೆ.
ಕೊಟ್ಟಿಗೆಹಾರ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಖಾಸಗಿ ಬಸ್ನಲ್ಲಿ ತಡರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳುತ್ತದೆ. ನಂತರ ಬಸ್ ಮುಂದಕ್ಕೆ ಚಲಿಸುತ್ತದೆ. ಈ ಸಂದರ್ಭದಲ್ಲಿ ಹೆಡ್ಲೈಟ್ ಡಿಮ್-ಡಿಪ್ ಮಾಡಿದಂತೆಯೂ ಕಾಣಿಸುತ್ತದೆ. ನಂತರ ಬಸ್ ಮುಂದಕ್ಕೆ ಚಲಿಸಿ ಅಲ್ಲಿ ನಿಂತಿದ್ದ ಇನ್ನೊಂದು ಬಸ್ಗೆ ಡಿಕ್ಕಿ ಹೊಡೆದು ನಿಲ್ಲುತ್ತದೆ. ಇಷ್ಟು ನಡೆದಿರುವ ಕುರಿತು ಸಿಸಿಟಿವಿ ಕ್ಲಿಪಿಂಗ್ ಲಭ್ಯವಾಗಿದ್ದು, ಪ್ರಕರಣದ ಪೂರ್ಣ ವಿವರ ಇನ್ನಷ್ಟೇ ಬಯಲಾಗಬೇಕಿದೆ.