Bheema theera : ವಿಜಯಪುರದ ಭೀಮಾತೀರದಲ್ಲಿ ಮತ್ತೊಮ್ಮೆ ಗುಂಡಿನ ಮೊರೆತ ಕೇಳಿಬಂದಿದೆ. ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ರೌಡಿ ಶೀಟರ್ ಭೀಮನಗೌಡ ಬಿರಾದಾರ್ ಮೇಲೆ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದಾರೆ.
ರೌಡಿಶೀಟರ್ ಭೀಮನಗೌಡ ಬಿರಾದಾರ್ ಮೇಲೆ ಮೂರು ಸುತ್ತು ಗುಂಡು ಹಾರಿಸಲಾಗಿದ್ದು, ತಲೆ ಹಾಗೂ ಎದೆಗೆ ಗುಂಡುಗಳು ತಗುಲಿವೆ. ಗಂಭೀರ ಗಾಯಗೊಂಡಿರುವ ಬಿರಾದಾರ್ನನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಬಿರಾದಾರ್, ಭೀಮಾತೀರದ ಮಹಾದೇವ ಬೈರಗೊಂಡ ಪರಮಾಪ್ತ ಹಾಗೂ ಬಲಗೈ ಬಂಟ. ಮೂರರಿಂದ ನಾಲ್ಕು ಮಂದಿ ಮುಸುಕುಧಾರಿಗಳಿಂದ ಈ ಕೃತ್ಯ ನಡೆದಿದೆ. ಗುಂಡು ಹಾರಿಸಿದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಬಿರಾದಾರ್, ದೇವರ ನಿಂಬರಗಿ ಗ್ರಾಮದ ಕಟಿಂಗ್ ಶಾಪ್ನಲ್ಲಿ ಕಟಿಂಗ್ ಮಾಡಿಸಿಕೊಳ್ಳಲು ಆಗಮಿಸಿದ್ದ. ಈ ವೇಳೆ ಎಂಟ್ರಿ ಕೊಟ್ಟ ದುಷ್ಕರ್ಮಿಗಳು, ಕಟಿಂಗ್ ಮಾಡುವವನ ಕಣ್ಣಿಗೆ ಖಾರದ ಪುಡಿ ಎರಚಿ ಗುಂಡು ಹಾರಿದ್ದಾರೆ. ಗುಂಡೇಟು ತಿಂದು, ಸ್ಥಳದಲ್ಲಿ ರಕ್ತಸಿಕ್ತವಾಗಿ ಒದ್ದಾಡುತ್ತಿದ್ದ ಬಿರಾದಾರ್ನನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಹಳೆಯ ವೈಷಮ್ಯದ ಹಿನ್ನಲೆ ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೆಡತನ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ಬೆಂಡೆಗುಂಬಳ್ ಹಾಗೂ ಇನ್ನಿತರ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೇವರನಿಂಬರಗಿ ಗ್ರಾಮದಲ್ಲಿ ಭಯದ ವಾತಾವರಣ ಆವರಿಸಿದೆ.