ಶಿವಮೊಗ್ಗ: ಗ್ರಾಮ ಪಂಚಾಯಿತಿ ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳು ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ ಹೇಳಿದರು. ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಈಗಾಗಲೇ ಗ್ರಾಪಂ ಚುನಾವಣೆಯ ಮೊದಲ ಹಂತದ ಪ್ರಕ್ರಿಯೆ ಆರಂಭಗೊಂಡಿದೆ. ಕೆಲವೆಡೆ ನಾಮಪತ್ರ ಸಲ್ಲಿಕೆ ವೇಳೆ ಅಧಿಕಾರಿಗಳು ಪ್ರಮಾಣಪತ್ರ ಕೇಳುತ್ತಿರುವುದು ಬೆಳಕಿಗೆ ಬಂದಿದೆ. ಆದರೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಲ್ಲ ಎಂದರು.
ಮಹಾನಗರ ಪಾಲಿಕೆ, ನಗರಸಭೆ, ತಾಪಂ, ಜಿಪಂ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಈ ಪ್ರಕ್ರಿಯೆ ಕಡ್ಡಾಯವಾಗಿದೆ. ಚುನಾವಣಾ ಆಯೋಗದ ಆದೇಶದಂತೆಯೇ ಗ್ರಾಪಂಗೆ ಸ್ಪರ್ಧಿಸುವ ಅಭ್ಯರ್ಥಿಗಳು ಬಿಳಿಹಾಳೆ ಮೇಲೆ ಮಾಹಿತಿಯನ್ನು ಸಿದ್ಧಪಡಿಸಿ ಚುನಾವಣಾಧಿಕಾರಿ ಮುಂದೆ ಸಹಿ ಹಾಕಿದರೆ ಸಾಕು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಹಾಗಾಗಿ ಪ್ರಮಾಣಪತ್ರ ಸಲ್ಲಿಸಬೇಕು ಎಂಬುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಭಿನ್ನಾಭಿಪ್ರಾಯ ಶಮನಕ್ಕೆ ಸೂಚನೆ: ಸೊರಬದಲ್ಲಿ ಪಕ್ಷದ ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯ ಶೀಘ್ರವೇ ಬಗೆಹರಿಯಲಿದೆ. ಈಗಾಗಲೇ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಈ ಬಗ್ಗೆ ಸೂಚನೆ ನೀಡಿದ್ದಾರೆ. ಈಗಾಗಲೇ 15 ಜನರ ಕೋರ್ ಕಮಿಟಿ ರಚಿಸಿದ್ದು, ಎಲ್ಲ ಸಮಸ್ಯೆ ನಿವಾರಣೆಗೂ ಕ್ರಮ ಕೈಗೊಳ್ಳುತ್ತಾರೆ. ಎಲ್ಲರೂ ಒಟ್ಟಾಗಿ ಈ ಚುನಾವಣೆ ಎದುರಿಸುತ್ತೇವೆ. ವಿಶೇಷವಾಗಿ ಎಂ.ಬಿ.ಭಾನುಪ್ರಕಾಶ್ ಮತ್ತು ನಾನು ಈ ಬಗ್ಗೆ ಹೆಚ್ಚು ಗಮನಹರಿಸುವಂತೆ ಸೂಚನೆ ಬಂದಿದೆ ಎಂದು ಸಿದ್ದರಾಮಣ್ಣ ಹೇಳಿದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..