More

    ಗೋಹತ್ಯೆ ನಿಷೇಧ ವಿಧೇಯಕ ಪಾಸ್​: 5 ಲಕ್ಷ ರೂ. ದಂಡ, 7 ವರ್ಷ ಜೈಲು ಶಿಕ್ಷೆಗೆ ಅವಕಾಶ

    ಬೆಂಗಳೂರು: ಪ್ರತಿಪಕ್ಷಗಳ ಗದ್ದಲ, ಕೋಲಾಹಲ, ಧರಣಿ, ಸಭಾತ್ಯಾಗದ ನಡುವೆಯೇ ರಾಜ್ಯದಲ್ಲಿ ಗೋಹತ್ಯೆ ನಿಷೇಧಿಸುವ ಕಠಿಣ ನಿಯಮಗಳನ್ನು ಒಳಗೊಂಡ ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ಸರ್ಕಾರ ಬುಧವಾರ ಯಶಸ್ವಿಯಾಗಿದೆ. ಆ ಮೂಲಕ ಉತ್ತರ ಪ್ರದೇಶ ಸರ್ಕಾರದ ತರುವಾಯ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತಿರುವ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲು ವೇದಿಕೆ ಸಜ್ಜಾಗಿದೆ.

    ಗೋ ಹತ್ಯೆ ಮಾಡಿದರೆ 7 ವರ್ಷಗಳವರೆಗೆ ಜೈಲುವಾಸ, ಮೊದಲ ಬಾರಿ ಜಾನುವಾರು ಹತ್ಯೆಗೆ 50 ಸಾವಿರದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸುವ ಅಂಶಗಳು ಪ್ರಸ್ತಾವಿತ ಕಾಯ್ದೆಯಲ್ಲಿವೆ. ವಿಧಾನ ಪರಿಷತ್‌ನಲ್ಲೂ ವಿಧೇಯಕ ಅನುಮೋದನೆ ಪಡೆದುಕೊಂಡ ಬಳಿಕ ರಾಜ್ಯಪಾಲರ ಸಹಿಗೆ ಕಳಿಸಲಾಗುತ್ತದೆ. ಬಳಿಕ ನಿಯಮ ರಚಿಸಿ ಕಾಯ್ದೆ ಅನುಷ್ಠಾನವಾಗಲಿದೆ.

    ವಿಧಾನಸಭೆಯಲ್ಲಿ ಬುಧವಾರ ವಿಧೇಯಕ ಮಂಡನೆ ಪ್ರಕ್ರಿಯೆ ಹಠಾತ್ ನಡೆಯಿತು. ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ , ವಿಧೇಯಕ ಮಂಡನೆಗೆ ಮುಂದಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರತಿಪಕ್ಷಗಳ ಅನೇಕ ಸದಸ್ಯರು ಆಕ್ಷೇಪ ಎತ್ತಿದರು. ಸ್ಪೀಕರ್ ಪೀಠದ ಮುಂದೆ ಧಾವಿಸಿದರು. ಗದ್ದಲ, ಗಲಾಟೆ ನಡೆಸಿದರು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪರ ವಿರೋಧ ಘೋಷಣೆ ಕೂಗಿದರು. ಬಿಜೆಪಿ ಸದಸ್ಯರು ಕೇಸರಿ ಶಾಲು ಹೊದ್ದು ಸಂಭ್ರಮಿಸಿದರಲ್ಲದೆ, ವಿಧಾನಸಭೆ ಹೊರ ಆವರಣದಲ್ಲಿ ಗೋವು ತಂದು ಪೂಜೆ ಸಲ್ಲಿಸಿದರು.

    ಬಿಲ್ ಮಂಡನೆಯಾಗುತ್ತಿದ್ದಂತೆಯೇ ಜೆಡಿಎಸ್‌ನ ಎಚ್.ಕೆ. ಕುಮಾರಸ್ವಾಮಿ, ಈ ವಿಧೇಯಕ ಮಂಡನೆಯ ವಿಷಯ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರವಾಗಿಲ್ಲ. ಹಾಗಾಗಿ ಮಂಡನೆ ಮಾಡಲು ಅವಕಾಶ ಕೊಡಬೇಡಿ ಎಂದು ಸ್ಪೀಕರ್‌ಗೆ ಮನವಿ ಮಾಡಿದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸ್ಪೀಕರ್ ನಡೆಯನ್ನು ಖಂಡಿಸಿದರು. ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಮುಖ ವಿಧೇಯಕ ಮಂಡಿಸುವ ಬಗ್ಗೆ ತೀರ್ಮಾನವಾಗಿತ್ತು, ಆ ಪ್ರಕಾರ ಅವಕಾಶ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರಲ್ಲದೇ, ಮಂಡನೆಗೆ ಸೂಚನೆ ನೀಡಿದರು.

    ಈ ನಡುವೆ ನಮಗೆ ಈ ವಿಧೇಯಕದ ಅಗತ್ಯವಿದೆ, ತಾಕತ್ತಿದ್ದರೆ ಚರ್ಚೆ ಮಾಡಿ ಎಂದು ಬಿಜೆಪಿಯ ಸುನೀಲ್ ಕುಮಾರ್ ಪ್ರತಿಪಕ್ಷಗಳಿಗೆ ಸವಾಲೆಸೆದರೆ, ಕಾಂಗ್ರೆಸ್‌ನವರು ದನ ಕಡಿಯುವವರ ಪರ ಎಂದು ಸಿ.ಟಿ.ರವಿ ಘೋಷಣೆ ಹಾಕಿದರು. ಪ್ರತಿಯಾಗಿ, ವಿಧಾನಸಭೆಯನ್ನು ಬಿಜೆಪಿ ಕಚೇರಿ ಮಾಡಬೇಡಿ ಎಂದು ಕಾಂಗ್ರೆಸ್‌ನ ಎಚ್.ಕೆ.ಪಾಟೀಲ್ ಕಿಡಿಕಾರಿದರು. ಜೈ ಶ್ರೀರಾಮ್, ಹಿಂದು ವಿರೋಧಿ ಕಾಂಗ್ರೆಸ್, ಗೋ ಮಾತೆ ವಿರೋಧಿ ಕಾಂಗ್ರೆಸ್ ಎಂಬ ಘೋಷಣೆಗಳು ಆಡಳಿತ ಪಕ್ಷದ ಕಡೆಯಿಂದ ಮೊಳಗಿದವು. ಕಾಂಗ್ರೆಸ್ ಸದಸ್ಯರು ಸ್ಪೀಕರ್ ಪೀಠದ ಮುಂದೆ ಧರಣಿ ಕುಳಿತರು.
    ದಿನದ ಕಲಾಪಪಟ್ಟಿಯಲ್ಲಿ ವಿಧೇಯಕದ ಮಾಹಿತಿಯೇ ಇಲ್ಲ ಎಂದು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಕಲಾಪವನ್ನು ಮುಂದೂಡಿ ಪುನಃ ಪ್ರತಿಪಕ್ಷ ಸದಸ್ಯರನ್ನು ಮನವೊಲಿಸಲು ಸ್ಪೀಕರ್ ನಡೆಸಿದ ಪ್ರಯತ್ನ ಫಲಕೊಡಲಿಲ್ಲ. ಎಷ್ಟೇ ಮನವಿ ಮಾಡಿದರೂ ಧರಣಿ ಹಿಂಪಡೆಯಲಿಲ್ಲ. ಈ ನಡುವೆ ಸರ್ಕಾರ ಹಠಕ್ಕೆ ಬಿದ್ದು ವಿಧೇಯಕ ಮಂಡನೆ, ಚರ್ಚೆ, ಅನುಮೋದನೆ ಪ್ರಕ್ರಿಯೆ ಮುಗಿಸಿತು.

    ವಿಧೇಯಕ ಮಂಡನೆಗೂ ಮುನ್ನ ಮತ್ತು ಬಳಿಕ ಬಿಜೆಪಿ ನಾಯಕರು ವಿಧಾನಸೌಧ ಆವರಣದಲ್ಲಿ ಗೋ ಪೂಜೆ ನೆರವೇರಿಸಿದರು. ಗೋವುಗಳನ್ನು ವಿಧಾನಸೌಧಕ್ಕೆ ತರಿಸಿಕೊಂಡಿದ್ದ ಪಕ್ಷದ ನಾಯಕರು, ವಿಶೇಷ ಪೂಜೆ ನೆರವೇರಿಸಿ ಘೋಷಣೆ ಹಾಕಿ ಸಂಭ್ರಮಿಸಿದರು. ಜತೆಗೆ ಕೇಸರಿ ಶಾಲು ಹಾಕಿಕೊಂಡು ಸಂಭ್ರಮಿಸಿ ಕಲಾಪದಲ್ಲಿ ಪಾಲ್ಗೊಂಡರು.

    ಆದರೆ, ಕೇಸರಿ ಶಾಲು ಧರಿಸಿ ಬಂದಿದ್ದಕ್ಕೆ ಎಚ್.ಕೆ. ಪಾಟೀಲ್ ಆಕ್ಷೇಪ ಎತ್ತಿದರು. ಆದರೆ, ಮಂಗಳವಾರ ಕಾಂಗ್ರೆಸ್ ಪ್ರತಿಪಕ್ಷ ನಾಯಕರು ಆದಿಯಾಗಿ ಅನೇಕ ಶಾಸಕರು ಕಪ್ಪು ಪಟ್ಟಿ ಧರಿಸಿ ಬಂದಿದ್ದನ್ನು ಪ್ರಸ್ತಾಪಿಸಿ ಎಚ್.ಕೆ.ಪಾಟೀಲ್‌ರ ಆಕ್ಷೇಪಕ್ಕೆ ಮಣೆ ಹಾಕಲಿಲ್ಲ.

    ನೀಚ ರಾಜಕಾರಣ ನನ್ನ ರಕ್ತದಲ್ಲೇ ಇಲ್ಲ, ಮಧ್ಯರಾತ್ರಿ ಸಿಎಂ ಬಳಿ ಹೋಗಿದ್ದನ್ನು ಸಾಬೀತು ಮಾಡಿ…

    ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts