ಬೆಂಗಳೂರು ಗ್ರಾಮಾಂತರ: ಕಳೆದ ವರ್ಷ ಮೊದಲ ಸಲ ಕರೊನಾ ಹಾವಳಿ ಇಟ್ಟಾಗ ಹಲವರು 'ಗೋ ಕರೊನಾ ಗೋ..' ಎಂದು ತಮ್ಮದೇ ಆದ ರೀತಿಯಲ್ಲಿ ಕರೊನಾವನ್ನು ಓಡಿಸಲು ಅಥವಾ ತಡೆಯಲು ಪ್ರಯತ್ನ ಮಾಡಿದ್ದರು. ಇದೀಗ ಎರಡನೇ ಅಲೆಯಲ್ಲಿ 'ಕರೊನಮ್ಮ ಊರು ಬಿಟ್ಟು ಹೋಗಮ್ಮ' ಎನ್ನುವ ಮೂಲಕ ಒಂದಷ್ಟು ಮಹಿಳೆಯರು ಮೊಸರನ್ನದ ಶಾಂತಿಯ ಮೊರೆ ಹೋಗಿದ್ದಾರೆ.
ಇಡೀ ವಿಶ್ವವನ್ನೇ ತಲ್ಲಣಗೊಳಿಸಿ ರಣಕೇಕೆ ಹಾಕುತ್ತಿರುವ ಕರೊನಾ ಮಹಾಮಾರಿಯ ಆಕ್ರೋಶ ತಣಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತರಬನಹಳ್ಳಿ ಗ್ರಾಮದ ಮಹಿಳೆಯರು ಮೊಸರನ್ನದ ಶಾಂತಿ ಮಾಡಿದ್ದಾರೆ. ಈ ಮಹಿಳೆಯರು ಗ್ರಾಮದ ಹೊಂಗೆ ಮರದ ಕೆಳಗೆ ಮೊಸರನ್ನ ನೈವೇದ್ಯ ಅರ್ಪಿಸಿ 'ಕರೊನಮ್ಮ ಊರು ಬಿಟ್ಟು ಹೋಗಮ್ಮ' ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು; ನಾಪತ್ತೆಯಾಗಿದ್ದ ಸೋಂಕಿತನ ಮೃತದೇಹ ಆಸ್ಪತ್ರೆ ಶವಾಗಾರದಲ್ಲೇ ಪತ್ತೆ!
ಈ ಹಿಂದೆ ಪ್ಲೇಗ್-ಕಾಲರಾ ಮತ್ತಿತರ ಸಾಂಕ್ರಾಮಿಕ ರೋಗಗಳು ದಾಳಿ ಇಟ್ಟ ಸಂದರ್ಭದಲ್ಲಿ ಊರಿನ ಮಹಿಳೆಯರೆಲ್ಲ ಸೇರಿ ಮೊಸರನ್ನ ನೈವೇದ್ಯದ ಮೂಲಕ ಕಾಯಿಲೆ ದೂರ ಮಾಡುವಂತೆ ಪ್ರಾರ್ಥಿಸುತ್ತಿದ್ದರು. ಅದೇ ಮಾದರಿಯಲ್ಲಿ ಪ್ರಸ್ತುತ ಕರೊನಾದಿಂದ ಮುಕ್ತಿ ದೊರೆಕಿಸಿಕೊಡುವಂತೆ ಮಹಿಳೆಯರು ಮೊಸರನ್ನ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. 'ಕರೊನಮ್ಮ ಊರು ಬಿಟ್ಟು ಹೋಗಮ್ಮ, ಜನರ ಬಲಿ ತೆಗೆದುಕೊಳ್ಳಬೇಡಮ್ಮ' ಶಾಂತಳಾಗು ಎಂದು ಮೊರೆ ಇಟ್ಟಿದ್ದಾರೆ.
ಅಷ್ಟೇ ಅಲ್ಲದೆ ಪ್ರತಿ ಗ್ರಾಮಗಳಲ್ಲೂ ಹೆಣ್ಣುಮಕ್ಕಳು ಹೊಂಗೆ ಅಥವಾ ಬೇವಿನ ಮರಕ್ಕೆ ಮೊಸರನ್ನದ ಎಡೆ ಇಟ್ಟು 'ಕರೊನಮ್ಮ ಊರು ಬಿಟ್ಟು ಹೋಗಮ್ಮ' ಎಂದು ಪ್ರಾರ್ಥಿಸಬೇಕು ಎಂದು ಗ್ರಾಮದ ಮಹಿಳೆಯರು ಮನವಿ ಮಾಡಿದ್ದಾರೆ. ಹಿಂದೆ ಭಾನಾಮತಿ ಕಾಟದ ಸಂದರ್ಭದಲ್ಲಿ ಕೆಲವೆಡೆ ಜನರು ಮನೆಯ ಬಾಗಿಲಿಗೆ 'ನಾಳೆ ಬಾ' ಎಂದು ಬರೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.