ಜಿಲ್ಲೆ

ಸಮಸ್ಯೆಗಳಿಗೆ ಮುಕ್ತಿ ಕೊಡಿ

ಇಂದಿರಾ ಎನ್ ಕೆ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಕಟ್ಟಡವೊಂದು ಸಿಆರ್‌ಝಡ್ ವ್ಯಾಪ್ತಿಯಲ್ಲಿದೆ ಇದಕ್ಕೆ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ನೀಡಿದ್ದ ಬಗ್ಗೆ ಸಾಲಿಗ್ರಾಮದ ಸಾವಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ ಮೆಸ್ಕಾಂ ಅಧೀಕ್ಷಕರನ್ನು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಉಡುಪಿ ಮೆಸ್ಕಾಂ ಅಧೀಕ್ಷಕ ದಿನೇಶ್ ಉಪಾಧ್ಯಾ, ನಮಗೆ ಸ್ಥಳೀಯಾಡಳಿತ ನೀಡಿದ ಎನ್‌ಒಸಿ ಆಧಾರದ ಮೇಲೆ ಸಂಪರ್ಕ ನೀಡುತ್ತೇವೆ ಎಂದರು.

ಗುರುವಾರ ಕೋಟ ಉಪವಿಭಾಗ ಇದರ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಚರ್ಚೆ ನಡೆಯಿತು.

ಕೋಟ ಗ್ರಾಮ ಪಂಚಾಯಿತಿ ಎದುರು ಇರುವ ಟ್ರಾನ್‌ಸ್ಾರಂನಲ್ಲಿ ಶಾರ್ಟ್ ಸರ್ಕ್ಯೂಟ್ ಆಗುತ್ತಿದ್ದು, ಬೇರೆಡೆಗೆ ಸ್ಥಳಾಂತರಿಸಿ ಎಂದು ಕೋಟ ಪಂಚಾಯಿತಿ ಸದಸ್ಯ ಭುಜಂಗ ಗುರಿಕಾರ ಮನವಿ ವಾಡಿದರು. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಮೆಸ್ಕಾಂ ತಿಳಿಸಿತು.

ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್ ಕಂಬದಲ್ಲಿ ಖಾಸಗಿ ಕೇಬಲ್‌ಗಳು ಜೋತಾಡುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲು ಭುಜಂಗ ಗುರಿಕಾರ ಇಲಾಖೆಗೆ ಸಲಹೆ ನೀಡಿದರು. ಐರೋಡಿ ಭಾಗದ ಕೃಷಿ ಭೂಮಿಯಲ್ಲಿ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಜೋತಾಡುತ್ತಿರುವ ಬಗ್ಗೆ ಸುರೇಶ್ ಕುಂದರ್ ಮೆಸ್ಕಾಂ ಗಮನ ಸೆಳೆದಿದ್ದು, ಸಮಸ್ಯೆ ಬಗೆಹರಿಸುವುದಾಗಿ ಮೆಸ್ಕಾಂ ತಿಳಿಸಿತು.

ಪಾಂಡೇಶ್ವರ ವ್ಯಾಪ್ತಿಯಲ್ಲಿ ಮೂರು ಹೆಚ್ಚುವರಿ ಟಿಸಿ ಅಳವಡಿಸುವ ಕುರಿತು ಪಾಂಡೇಶ್ವರ ಪಂಚಾಯಿತಿ ಸದಸ್ಯ ಪ್ರತಾಪ್ ಶೆಟ್ಟಿ ಗಮನ ಸೆಳೆದರು. ಈ ಬಗ್ಗೆ ಮೆಸ್ಕಾಂ ಯೋಜನೆ ಕಾರ್ಯರೂಪದಲ್ಲಿರುವ ಬಗ್ಗೆ ವಾಹಿತಿ ನೀಡಲಾಯಿತು.

ಪಂಚಾಯಿತಿಯಿಂದ ದಾರಿದೀಪ ಅಳವಡಿಸಲು ಪಂಚಾಯಿತಿ ಕ್ರೀಯಾ ಯೋಜನೆ ಕಾಮಗಾರಿಗಳ ಬಿಲ್ ಪಾವತಿಗೆ ಮಂಗಳೂರು ಕೇಂದ್ರ ಕಚೇರಿಗೆ ಹೋಗುವ ಸಮಸ್ಯೆ ಬಗೆಹರಿಸಿ ಜಿಲ್ಲಾಮಟ್ಟದ ಕೇಂದ್ರಗಳಲ್ಲಿ ಬಗೆಹರಿಸಲು ಕ್ರಮವಹಿಸುವಂತೆ ರವೀಂದ್ರ ತಿಂಗಳಾಯ ಮನವಿ ವಾಡಿದರು.

ಕೋಟತಟ್ಟು ಪಡುಕರೆ ಭಾಗದಲ್ಲಿ ವಿದ್ಯುತ್ ತಂತಿ ಕೆಳಮಟ್ಟದಲ್ಲಿದೆ ಇದನ್ನು ಸರಿಪಡಿಸುವಂತೆ ಕೋಟತಟ್ಟು ಪಂಚಾಯಿತಿ ಸದಸ್ಯೆ ವಿದ್ಯಾ ಸಾಲಿಯಾನ್ ಮೆಸ್ಕಾಂ ಗಮನ ಸೆಳೆದರು. ಈ ಬಗ್ಗೆ ಶ್ರೀದಲ್ಲಿ ಪರಿಹಾರ ಕಂಡಕೊಳ್ಳಲಿದೆ ಎಂದು ಮೆಸ್ಕಾಂ ತಿಳಿಸಿತು.

ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿರುವ ಮೆಸ್ಕಾಂ ಇಂಜಿನಿಯರ್ ಪ್ರಶಾಂತ್ ಶೆಟ್ಟಿ ಅವರಿಗೆ ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಅಭಿನಂದನೆ ತಿಳಿಸಿದರು.

ಕೋಟ ವಿಭಾಗದ ಸಹಾಯಕ ಕಾರ್ಯವಾಹಕ ಇಂಜಿನಿಯರ್ ಪ್ರತಾಪ್‌ಚಂದ್ರ ಶೆಟ್ಟಿ, ಸಹಾಯಕ ಇಂಜಿನಿಯರ್ (ತಾಂತ್ರಿಕ) ಶ್ರೀಕಾಂತ್, ಕೋಟ ಮೆಸ್ಕಾಂ ಇಂಜಿನಿಯರ್ ಪ್ರಶಾಂತ್ ಶೆಟ್ಟಿ, ವಿವಿಧ ಶಾಖಾಧಿಕಾರಿಗಳಾದ ಮಹೇಶ್, ವೈಭವ್ ಶೆಟ್ಟಿ, ಕೋಟ ಉಪವಿಭಾಗದ ಲೆಕ್ಕಾಧಿಕಾರಿ ಕೆ.ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.