ಕೊಕ್ಕರ್ಣೆ: ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿಯ 34ನೇ ಕುದಿ ಗ್ರಾಮದ ಹೊರ್ಲಾಳಿ ಜಡ್ಡಿನಮನೆ ನಿವಾಸಿ ಯಶೋದಾ ಅವರು ಕಿಡ್ನಿ ಹಾಗು ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಐಸಿಯು ಟಕದಲ್ಲಿ ದಾಖಲಾಗಿದ್ದಾರೆ. ಅವರ ಚಿಕಿತ್ಸೆಗೆ ಇದುವರೆಗೆ ಎರಡು ಲಕ್ಷಕ್ಕೂ ಅಧಿಕ ವ್ಯಯಿಸಿದ್ದು, ಮುಂದಿನ ಚಿಕಿತ್ಸೆಗೆ ಅಂದಾಜು ನಾಲ್ಕು ಲಕ್ಷ ರೂ.ಗಳ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಯಶೋದಾ ಅವರ ಪತಿ ಕೃಷ್ಣ ನಾಯ್ಕ ಕೂಲಿ ಕಾರ್ಮಿಕರಾಗಿದ್ದು, ಅಷ್ಟೊಂದು ಹಣ ಹೊಂದಿಸಲಾಗದೆ ಸಹೃದಯಿಗಳ ಸಹಾಯ ಕೋರಿದ್ದಾರೆ.
ಕೃಷ್ಣ ಅವರ ಜತೆ ರೋಣಿತ್, ಇಂಚರ, ಪ್ರೀತಂ, ಸನ್ನಿತ್, ಸಾನ್ವಿತ್, ವೇದಾಂತ್ ಸೇರಿದಂತೆ ಆರು ಪುಟಾಣಿಗಳ ತಂಡ ಭಾನುವಾರ ಬೆಳಗ್ಗೆಯಿಂದ ಸುತ್ತಮುತ್ತಲಿನ ಹೊರ್ಲಾಳಿ, 5 ಸೆಂಟ್ಸ್, ಮುದ್ದೂರು, ದಾಸಾನುಕಟ್ಟೆ, ಮಿಯಾರು ಮೊದಲಾದೆಡೆಗಳಲ್ಲಿ ಬಿರುಮಳೆಯನ್ನು ಲೆಕ್ಕಿಸದೆ ಮನೆಮನೆಗೆ ತೆರಳಿ ಹಣ ಸಂಗ್ರಹಿಸುತ್ತಿದ್ದಾರೆ. ಶ್ರೀದಲ್ಲಿ ತಾಯಿ ಗುಣಮುಖವಾಗಲಿ ಎಂಬ ಪ್ರಾರ್ಥನೆ ಈ ಮಕ್ಕಳದು.
ಯಶೋದಾ ಅವರ ಪುತ್ರ ಎಂಟು ವರ್ಷದ ರೋಣಿತ್ ಪಕ್ಕದ ಮನೆಯ ಚಂದ್ರ ಕುಲಾಲ್ ಎಂಬುವರ ಮನೆಯಲ್ಲಿ ಆಶ್ರಯ ಪಡೆದು ಧನ ಸಹಾಯ ಸಂಗ್ರಹಕ್ಕೆ ಶ್ರಮಿಸುತ್ತಿದ್ದಾರೆ. ಮಕ್ಕಳ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿ, ಧನಸಹಾಯ ನೀಡುತ್ತಿದ್ದಾರೆ. ಸಹೃದಯಿಗಳು ಕೃಷ್ಣ ಅವರ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 01522250000377, ಐಎಫ್‌ಎಸ್‌ಸಿ ಕೋಡ್-ಸಿಎನ್‌ಆರ್‌ಬಿ 0010152, ಗೂಗಲ್ ಪೇ ನಂಬರ್: 7899053905 ಕಳುಹಿಸುವಂತೆ ವಿನಂತಿಸಿದ್ದಾರೆ.