ಜಿಲ್ಲೆ

ಗಣೇಶೋತ್ಸವದ ವೇಳೆ ಪ್ರಸಾದ ವಿನಿಯೋಗಕ್ಕೂ ಬಂತು ರೂಲ್ಸ್​; FSSAI ಅನುಮತಿ ಕಡ್ಡಾಯ, ಇಲ್ಲದಿದ್ರೆ ಕಠಿಣ ಕ್ರಮ

ಬೆಂಗಳೂರು: ಗಣೇಶ ಚತುರ್ಥಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಗಣೇಶೋತ್ಸವವನ್ನು ಆಯೋಜಿಸಿರುವ ಮಂಡಳಿಯವರು ತಯಾರಿ ನಡೆಸುತ್ತಿದ್ದಾರೆ. ವಿನಾಯಕನ ಪ್ರತಿಷ್ಠಾಪನೆಯ ಜೊತೆಜೊತೆಗೆ ಜನರು ಪೂಜೆ ಸಮಯದಲ್ಲಿ ಹಂಚುವ ಪ್ರಸಾದದ ಕುರಿತು ಈಗಾಗಲೇ ಮಂಡಳಿಯವರು ಮೆನು ಸೆಲೆಕ್ಟ್​ ಮಾಡಿದ್ದು, ಪ್ರಸಾದ್ ವಿನಿಯೋಗದ ವಿಚಾರವಾಗಿ ರಾಜ್ಯ ಸರ್ಕಾರ ಹೊಸದೊಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈಗಾಗಲೇ ಗಣೇಶೋತ್ಸವ ಆಚರಿಸುವ ಸಂಘಟನೆಗಳಿಗೆ ಈಗಾಗಲೇ ಪೊಲೀಸ್​, ಬೆಸ್ಕಾಂ, ಬಿಬಿಎಂಪಿ, ಅಗ್ನಿಶಾಮಕ ಇಲಾಖೆ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಿದ್ದು, ಏಕಗವಾಕ್ಷಿ ಪದ್ಧತಿಯಡಿ ಅನುಮತಿ ನೀಡುವುದಾಗಿ ಸರ್ಕಾರ ತಿಳಿಸಿದೆ. ಕಟ್ಟುನಿಟ್ಟಿನ ನಿಯಮಗಳಿಂದ ಈಗಾಗಲೇ ಗಣೇಶೋತ್ಸವ ಸಮಿತಿಯವರು ಬೇಸತ್ತಿದ್ದು, ಇದೀಗ ಪ್ರಸಾದ ವಿತರಣೆಗೂ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಆದೇಶ ಪತ್ರದಲ್ಲೇನಿದೆ?

ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್‌ಗಳಲ್ಲಿ ಪ್ರಸಾದವಾಗಿ ವಿತರಿಸಲಾಗುವ ಆಹಾರ ಪದಾರ್ಥಗಳ ಶುಚಿತ್ವ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, FSSAI ಪರವಾನಗಿ ಪಡೆದಿರುವ ವ್ಯಕ್ತಿ/ಸಂಸ್ಥೆಗಳಿಂದ ಮಾತ್ರ ಪ್ರಸಾದ ಸಿದ್ಧಪಡಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶಿಸಿರುವುದಾಗಿ ಆರೋಗ್ಯ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದೆ.

ಪ್ರಸಾದ ವಿತರಣೆಯಿಂದ ಯಾವುದೇ ಅನಾಹುತಗಳು ಸಂಭವಿಸದಿರಲಿ ಎನ್ನುವ ಕಾರಣಕ್ಕೆ ಈ ನಿಯಮ ಜಾರಿ ಮಾಡಲಾಗಿದೆ. ಗಣೇಶನ ಹಬ್ಬಕ್ಕೆ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗುವ ಆಹಾರ ಪದಾರ್ಥಗಳಲ್ಲಿ ನೈರ್ಮಲ್ಯ, ಗುಣಮಟ್ಟ ಹಾಗೂ ಸುರಕ್ಷತೆ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಗಣೇಶ ಪ್ರತಿಷ್ಠಾಪಿಸುವ ಮಂಡಳಿಗಳಿಗೆ ಸೂಚನೆ ನೀಡಿದೆ.

ಅದರಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದಿರುವ ವ್ಯಕ್ತಿಗಳು ಅಥವಾ ಅಂತಹ ಸಂಸ್ಥೆಗಳಿಂದ ಮಾತ್ರವೇ ಪ್ರಸಾದ ಸಿದ್ಧಪಡಿಸಿ, ಅದನ್ನು ಸಾರ್ವಜನಿಕರಿಗೆ ವಿತರಣೆ ಮಾಡಬೇಕು ಎಂದು ಹೇಳಿದೆ. ಈಗಾಗಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳೀಯ ಪೊಲೀಸ್‌ ಠಾಣೆ, ಬೆಸ್ಕಾಂ, ಸ್ಥಳೀಯ ಆಡಳಿತಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.