ಫೋಟೋ ಸುದ್ದಿಯೊಳಗಿದೆ.. 
ಜಿಲ್ಲೆ

ಸಿಸಿಬಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ವಿದೇಶಿ ಪ್ರಜೆಗಳು; ಕರೊನಾ ಔಷಧದ ಹೆಸರಲ್ಲಿ ಸಾರ್ವಜನಿಕರಿಗೆ ವಂಚನೆ

ಬೆಂಗಳೂರು: ಕರೊನಾಗೆ ಸಂಬಂಧಿಸಿದ ಔಷಧ ಮಾರಾಟಕ್ಕಿರುವುದಾಗಿ ವೆಬ್‌ಸೈಟ್‌ನಲ್ಲಿ ಜಾಹೀರಾತು ಹಾಕಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಮಾಹಿತಿ ಆಧರಿಸಿ ಮೂವರು ವಿದೇಶಿ ಪ್ರಜೆಗಳನ್ನು ಹಿಡಿಯಲು ಹೋದ ಸಿಸಿಬಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ. ನೈಜೀರಿಯಾ ಮೂಲದ ಅಮೃತಹಳ್ಳಿ ನಿವಾಸಿಗಳಾದ ಜಾನ್ ಒಬ್ಬೊಡ್ಸೆ, ಗಾಡ್ಸ್‌ಟೈಮ್ ಒಗ್ಚುಕ್ವ, ಒಕ್ಕಲೋಯಿಸೆ ಪ್ರಾಸಿಯಸ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಆರೋಪಿಗಳು. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಆರೋಪಿಗಳು ವೆಬ್‌ಸೈಟ್‌ವೊಂದರಲ್ಲಿ ಶಿಫಾ ಫಾರ್ಮಸಿ ಹಾಸ್ಪಿಟಲ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಕರೊನಾಗೆ ಸಂಬಂಧಿಸಿದ ಸಿಪ್ಲಾ ಕಂಪನಿಯ ಟೊಸಿಲಿಜುಮ್ಜ್ ಇಂಜೆಕ್ಷನ್ ಆಕ್ಟೆಮ್ರಾ ಔಷಧ ಮಾರಾಟಕ್ಕೆ ಇರುವುದಾಗಿ ಜಾಹೀರಾತು ಹಾಕಿ ಅದರಲ್ಲಿ ಮೊಬೈಲ್ ಫೋನ್​ ನಂಬರ್ ನಮೂದಿಸಿದ್ದರು. ಇತ್ತೀಚೆಗೆ ಕೆಲ ಸಾರ್ವಜನಿಕರು ಈ ಔಷಧ ಖರೀದಿಸುವ ಉದ್ದೇಶದಿಂದ ಈ ನಂಬರ್‌ಗೆ ಕರೆ ಮಾಡಿದಾಗ ಮೂವರು ಆರೋಪಿಗಳ ಪೈಕಿ ಓರ್ವ ತನ್ನನ್ನು ಡಾ. ಫಿಲಿಪ್ಸ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಟೊಸಿಲಿಜುಮ್ಜ್ ಇಂಜೆಕ್ಷನ್ ಆಕ್ಟೆಮ್ರಾ ಬೇಕಾದರೆ ಮುಕೇಶ್ ಚಾಂದ್ ಹೆಸರಿನಲ್ಲಿರುವ ತಾನು ಸೂಚಿಸುವ ಬ್ಯಾಂಕ್ ಖಾತೆಗೆ ಮುಂಗಡವಾಗಿ ಇಂತಿಷ್ಟು ಹಣ ಹಾಕುವಂತೆ ಹೇಳುತ್ತಿದ್ದ. ಹಣ ಜಮೆ ಮಾಡಿದ ಬಳಿಕ ಆರೋಪಿಗಳು ಯಾವುದೇ ರೀತಿಯ ಔಷಧಗಳನ್ನೂ ಒದಗಿಸದೇ, ಮೊಬೈಲ್​ಫೋನ್​ ಸ್ವಿಚ್ಡ್​ ಆಫ್​ ಮಾಡಿ ಗ್ರಾಹಕರ ಸಂಪರ್ಕಕ್ಕೂ ಸಿಗದೆ ವಂಚಿಸುತ್ತಿದ್ದರು.

ಆರೋಪಿಗಳು ಪರಾರಿ: ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿ ತಾಂತ್ರಿಕ ಕಾರ್ಯಾಚರಣೆ ನಡೆಸಿದ್ದರು. ಆ ವೇಳೆ ಅಮೃತಹಳ್ಳಿಯ ಮರಿಯಣ್ಣ ಪಾಳ್ಯದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಆರೋಪಿಗಳು ನೆಲೆಸಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ಸುಳಿವಿನ ಆಧಾರದ ಮೇಲೆ ಮೇ 18ರಂದು ಸಂಜೆ ಆರೋಪಿಗಳು ನೆಲೆಸಿದ್ದ ಮನೆಗೆ ಪೊಲೀಸರು ದಾಳಿ ನಡೆಸಿದ್ದರು.

ಮನೆಯಲ್ಲಿದ್ದ ಮೂವರು ಆರೋಪಿಗಳು ಪ್ರಶ್ನಿಸಿದಾಗ, ಸಿಸಿಬಿ ತಂಡ ತಮ್ಮನ್ನು ಪೊಲೀಸರು ಎಂದು ಪರಿಚಯಿಸಿಕೊಂಡು ವಶಕ್ಕೆ ಪಡೆಯಲು ಮುಂದಾಗಿದ್ದರು. ಅಷ್ಟರಲ್ಲಿ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳ ಮನೆಯಲ್ಲಿ ಪತ್ತೆಯಾದ ಪಾಸ್‌ಪೋರ್ಟ್ ಪರಿಶೀಲಿಸಿದಾಗ ಮೂವರೂ ನೈಜೀರಿಯಾ ಮೂಲದವರು ಎಂಬುದು ತಿಳಿದು ಬಂದಿದೆ.