ಜಿಲ್ಲೆ

ಮುದ್ದೆ ಮಾಡಿಕೊಡುವಂತೆ ಕರೆಸಿ ಯುವತಿ ಮೇಲೆ ಅತ್ಯಾಚಾರ; ನಾಲ್ವರು ಅರೆಸ್ಟ್​

ರಾಮನಗರ: ಹೊಟ್ಟೆ ತುಂಬಾ ಹಸಿವಾಗುತ್ತಿದೆ ನನಗೆ ಅಡುಗೆ ಮಾಡಲು ಬರುವುದಿಲ್ಲ. ಮನೆಗೆ ಬಂದು ಮುದ್ದೆ ಮಾಡಿಕೊಡು ಎಂದು ಹೇಳಿ ವ್ಯಕ್ತಿಯೋರ್ ವ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕತ್ತಲೆಪಾಳ್ಯ ಗ್ರಾಮದಲ್ಲಿ ನಡೆದಿದೆ. 15 ದಿನಗಳ ಹಿಂದೆ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಪೊಲೀಸರು ಗೋಪಿ ಎಂಬಾತನನ್ನು ಬಂಧಿಸಿದ್ದು, ಈತನಿಗೆ ಸಹಾಯ ಮಾಡಿದ ಆರೋಪದ ಮೇಲೆ ವೆಂಕಟೇಶ್, ಶಶಿಕುಮಾರ್, ಚಂದ್ರಶೇಖರ್​ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಕತ್ತಲೆಪಾಳ್ಯ ಗ್ರಾಮದ ವೆಂಕಟೇಶ್ ಎಂಬುವವರಿಗೆ ಗೋಪಿ ಸಂಬಂಧಿಯಾಗಿದ್ದು, ಆಗಿಂದಾಗೆ ಅವರ ಮನೆಗೆ ಭೇಟಿ ನೀಡುತ್ತಿದ್ದ. ಈ ವೇಳೆ ಅಲ್ಲೇ ಪಕ್ಕದಲ್ಲಿ ವಾಸವಿದ್ದ ಯುವತಿಯನ್ನು ಗಮನಿಸಿದ್ದ ಆರೋಪಿ ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಹೀಗೆ ಮುಂದೊಂದಿ ದಿನ ಗೋಪಿ ಆ ಯುವತಿಗೆ ಮನೆಗೆ ಬಂದು ಮುದ್ದೆ ಮಾಡಿಕೊಡುವಂತೆ ಕರೆದಿದ್ದ. ಯುವತಿ ಮುದ್ದೆ ಮಾಡಿಕೊಡಲು ಗೋಪಿ ಮನೆಗೆ ಹೋಗಿದ್ದಳು. ಈ‌ ವೇಳೆ ಗೋಪಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದು, ಅದನ್ನು ವಿಡಿಯೋ ಮಾಡಿಕೊಂಡಿದ್ದಾನೆ. ವಿಚಾರ ಯಾರಿಗಾದರೂ ಹೇಳಿದರೆ ಸೋಶಿಯಲ್​ ಮೀಡಿಯಾಗೆ ಹಾಕುವುದಾಗಿ ಬೆದರಿಸಿದ್ದನಂತೆ. ಇದರಿಂದ ಹೆದರಿದ ಯುವತಿ ತಡವಾಗಿ ಹೇಳಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಉರ ಹಬ್ಬದ ಹಿನ್ನೆಲೆಯಲ್ಲಿ ತಡವಾಗಿ ಬೆಳಕಿಗೆ

ಘಟನೆ ನಡೆದು 15 ದಿನಗಳೇ ಕಳೆದರು ಪ್ರಕರಣ ಹೊರ ಬಂದಿರಲಿಲ್ಲ ಇದಕ್ಕೆ ಕಾರಣವಾಗಿದ್ದು ಊರ ಹಬ್ಬ ಎನ್ನಲಾಗಿದೆ. ಬಹಳ ವರ್ಷಗಳಿಂದ ಮಾಡದ ಹಬ್ಬವನ್ನ ಗ್ರಾಮದಲ್ಲಿ ಮಾಡಲಾಗುತಿತ್ತು. ಈ ವೇಳೆ ಅತ್ಯಾಚಾರದ ವಿಷಯವನ್ನ ಹೇಳಿದರೆ ಎಲ್ಲಿ ಗ್ರಾಮದಲ್ಲಿ ಜಗಳವಾಗುತ್ತೋ ಎಂದು ಭಯಗೊಂಡ ಯುವತಿ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ.

ಅಜ್ಜಿ ಸಾವಿನಿಂದ ಪ್ರಕರಣ ಬೆಳಕಿಗೆ

ಗ್ರಾಮದಲ್ಲಿ ಊರ ಹಬ್ಬದ ಕಾರಣದಿಂದ ಯುವತಿ ಅತ್ಯಾಚಾರದ ಸಂಗತಿಯನ್ನ ಯಾರ ಬಳಿಯು ಹೇಳಿಕೊಂಡಿರಲಿಲ್ಲ. ಹೀಗೀರುವಾಗ ಗ್ರಾಮದಲ್ಲಿ ಓರ್ವ‌ ವೃದ್ಧೆ ಮೃತಪಟ್ಟಿದ್ದರು. ಹಾಗಾಗಿ ಊರ ಹಬ್ಬವನ್ನ ನಿಲ್ಲಿಸಲಾಗಿತ್ತು. ಹಬ್ಬದ ಆಚರಣೆ ನಿಂತ ಹಿನ್ನೆಲೆಯಲ್ಲಿ ಯುವತಿ ಪೋಷಕರ ಬಳಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾಳೆ. ಮಗಳ ವಿಚಾರ ತಿಳಿದ ಪೋಷಕರು ಬಿಡದಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಗೋಪಿ ಹಾಗೂ ಆತನಿಗೆ ಸಹಾಯ ಮಾಡಿದ ವೆಂಕಟೇಶ್, ಶಶಿಕುಮಾರ್, ಚಂದ್ರಶೇಖರ್​ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.