ತುಮಕೂರು: ರೌಡಿಶೀಟರ್ ಆರ್‌ಎಕ್ಸ್ ಮಂಜ ಅಲಿಯಾಸ್ ಉಚ್ಚೆ ಮಂಜನ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಮೇಯರ್ ಗಡ್ಡರವಿ ಕೊಲೆ ಪ್ರಕರಣದ ಸಾಕ್ಷ್ಯ ನಾಶಪಡಿಸುವ ಹಿನ್ನೆಲೆಯಲ್ಲಿ ಈ ಕೊಲೆಗೈಯಲಾಗಿದೆ ಎಂಬುದನ್ನು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿ ಬೆಂಗಳೂರಿನ ಬಸವೇಶ್ವನಗರದ ಎಸ್.ಅಜಯ್ ಅಲಿಯಾಸ್ ಕ್ಯಾಟ್ (19) ಎಂಬಾತನನ್ನು ಗುರುವಾರ ಬಂಧಿಸಿರುವ ಪೊಲೀಸರು, ಇದಕ್ಕೂ ಮುನ್ನ ಡಿ.10ರಂದು ತುಮಕೂರಿನ ಶಾರದಾದೇವಿನಗರದ ಅಮಾನ್ (20), ಎನ್‌ಆರ್ ಕಾಲೋನಿಯ ಎಂ.ಮನೋಜ ಅಲಿಯಾಸ್ ಮಂಡಲ (22) ಹಾಗೂ ಕೊಲ್ಹಾಪುರದಮ್ಮ ದೇವಸ್ಥಾನದ ಬಳಿಯ ಮಹೇಶ ಅಲಿಯಾಸ್ ದುಬ್ಬ (21) ಎಂಬವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಾಕ್ಷ್ಯ ನಾಶ ಮಾಡುವ ಸಲುವಾಗಿ ಕೊಲೆ: ಡಿ.2ರಂದು ಬರ್ಬರವಾಗಿ ಕೊಲೆಯಾಗಿದ್ದ ಉಚ್ಚೆ ಮಂಜ ತುಮಕೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡರವಿ ಕೊಲೆ ಪ್ರಕರಣದಲ್ಲಿ ಪ್ರಮುಖ ಪ್ರತ್ಯಕ್ಷ ಸಾಕ್ಷಿ ಆಗಿರುವುದರಿಂದ ಸಾಕ್ಷ್ಯ ನಾಶಪಡಿಸುವ ಉದ್ದೇಶಕ್ಕಾಗಿ ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿಗಳು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಅರುಣ ಅಲಿಯಾಸ್ ಲಾಂಗ್ ಅರುಣ ಎಂಬುವನು ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಮುಂದುವರಿದಿದೆ.