ಜಿಲ್ಲೆ

ಎದೆಗೂಡಲ್ಲಿ ಫುಟ್​ಬಾಲ್​ ಗಾತ್ರದ ಗಡ್ಡೆ, ತೆಗೆಯುವುದರಲ್ಲಿ ಯಶಸ್ವಿಯಾಯಿತು ಫೋರ್ಟಿಸ್​ ವೈದ್ಯರ ತಂಡ; ಇದು ವಿಶ್ವದಲ್ಲೇ ಬೃಹತ್ ಗಡ್ಡೆ!

ಬೆಂಗಳೂರು: 25 ವರ್ಷದ ಯುವಕನ ಎದೆಯಲ್ಲಿ ಬೆಳೆದಿದ್ದ 13.85 ಕೆ.ಜಿ. ತೂಕದ ಬೃಹತ್ ಗಡ್ಡೆಯನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆಗೆದುಹಾಕಿದ್ದಾರೆ. ಇದು ಎದೆಯಲ್ಲಿ ಕಂಡುಬಂದ ಗಡ್ಡೆಯ ಪೈಕಿ ವಿಶ್ವದಲ್ಲೇ ಅತಿ ದೊಡ್ಡ ಗಡ್ಡೆ ಎನ್ನಲಾಗಿದೆ.

ಈ ಬಗ್ಗೆ ವರ್ಚುವಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಿಟಿವಿಎಸ್ ನಿರ್ದೇಶಕ ಡಾ. ಉದ್ದೀತ್ ಧೀರ್, 2015ರಲ್ಲಿ 9.5 ಕೆ.ಜಿ. ತೂಕದ ಚೆಸ್ಟ್‌ ಟ್ಯೂಮರನ್ನು ಗುಜರಾತ್ ಆಸ್ಪತ್ರೆಯೊಂದರಲ್ಲಿ ತೆಗೆಯಲಾಗಿತ್ತು. ಇದೇ ದೊಡ್ಡ ಟ್ಯೂಮರ್ ಎನ್ನಲಾಗಿತ್ತು. ಆದರೀಗ, 13.85 ಕೆ.ಜಿ. ತೂಕದ ಟ್ಯೂಮರ್‌ ತೆಗೆಯಲಾಗಿದ್ದು, ಇದು ವಿಶ್ವದಲ್ಲೇ ದೊಡ್ಡ ಟ್ಯೂಮರ್ ಎನ್ನಲಾಗಿದೆ. ಅಲ್ಲದೆ ಇದು ಫುಟ್‌ಬಾಲ್ ಗಾತ್ರದಷ್ಟಿದೆ ಎಂದು ವೈದ್ಯರು ವಿವರಿಸಿದರು.

ಪ್ರಕರಣದ ವಿವರ: ದೇವೇಶ್ ಶರ್ಮಾ ಎಂಬ 25 ವರ್ಷದ ಯುವಕ ಕಳೆದ 2-3 ತಿಂಗಳಿನಿಂದ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಎದೆಗೂಡಿನಲ್ಲಿ ಶೇ.90ರಷ್ಟು ಭಾಗ ಬೃಹತ್ ಗಾತ್ರದ ಟ್ಯೂಮರ್ ಬೆಳೆದಿರುವುದು ಸಿ.ಟಿ. ಸ್ಕ್ಯಾನ್​ ಮಾಡಿಸಿದ ಬಳಿಕ ಗಮನಕ್ಕೆ ಬಂದಿತ್ತು. ಇದು ವೈದ್ಯಲೋಕಕ್ಕೆ ಸವಾಲಾಗಿತ್ತು. ಇಷ್ಟು ದೊಡ್ಡ ಪ್ರಮಾಣದ ಟ್ಯೂಮರ್ ತೆಗೆಯುವುದು ಅಸಾಧ್ಯ. ಏಕೆಂದರೆ, ಟ್ಯೂಮರ್ ತೆಗೆಯಲು ಅರಿವಳಿಕೆ ನೀಡುವುದರಿಂದ ಟ್ಯೂಮರ್‌ನ ಭಾರ ಹೆಚ್ಚಾಗಿ ಹೃದಯ ಸಂಕುಚಿತಗೊಂಡು ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಅರಿವಳಿಕೆ ನೀಡುವ ಕ್ರಿಯೆಯನ್ನು ಅತ್ಯಂತ ಜಾಗರೂಕತೆಯಿಂದ ನಮ್ಮ ತಂಡ ನಿರ್ವಹಿಸಿತು ಎಂದರು.

ಮತ್ತೊಂದು ಸವಾಲಿನ ವಿಷಯ ಎಂದರೆ, ರೋಗಿಯ ರಕ್ತದ ಗುಂಪು ಎಬಿ ನೆಗೆಟಿವ್, ಇದು ಅಪರೂಪದ ರಕ್ತದ ಗುಂಪು ಆಗಿದ್ದರಿಂದ ರಕ್ತದ ಹರಿವಿನ ಬಗ್ಗೆ ಹೆಚ್ಚು ಜಾಗರೂಕತೆಯಿಂದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ನಾಲ್ಕು ಗಂಟೆಗಳ ನಿರಂತರ ಶಸ್ತ್ರಚಿಕಿತ್ಸೆ ಬಳಿಕ ಅತಿದೊಡ್ಡ ಟ್ಯೂಮರ್‌ ಹೊರ ತೆಗೆಯಲಾಗಿದ್ದು, ರೋಗಿಯೂ ಆರೋಗ್ಯವಾಗಿದ್ದಾರೆ ಎಂದು ವಿವರಿಸಿದರು.