ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವಸಂತ ಬಂಗೇರ ಒರಟರಂತೆ ಕಂಡರೂ ಮೃದು ಮನಸ್ಸಿನ ವ್ಯಕ್ತಿಯಾಗಿದ್ದರು. ಕರಾವಳಿ ಭಾಗದ ದೇವರಾಜ ಅರಸು ಎಂದು ಬಿಂಬಿರಾಗಿದ್ದರು. ಬೆಳ್ತಂಗಡಿ ಸಮಗ್ರ ಅಭಿವೃದ್ಧಿಗೆ ಇವರ ಆಡಳಿತವೇ ಮುನ್ನುಡಿಯಾಗಿದೆ ಎಂದು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಹೇಳಿದರು.
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರಯನಕೆರೆಯಲ್ಲಿ ಆಯೋಜಿಸಲಾಗಿದ್ದ ಮಾಜಿ ಶಾಸಕ ವಸಂತ ಬಂಗೇರರಿಗೆ ಸಾವಿರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಬಡವರ ನೋವು ಹಾಗೂ ಕಷ್ಟದ ನಾಡಿಮಿಡಿತವನ್ನು ಅವರು ಅರಿತುಕೊಂಡಿದ್ದರು. ಇಂದಿನ ವ್ಯವಹಾರಿಕ ಜಗತ್ತಿನಲ್ಲಿ ಮನುಷ್ಯನಿಗೆ ಗೌರವ, ಮರ್ಯಾದೆ ಸಿಗುವುದು ಅವನು ಸಮಾಜದಲ್ಲಿ ಸಂಪಾದಿಸಿದ ಸ್ಥಾನಮಾನದಿಂದ ಎಂಬುದಕ್ಕೆ ಅವರ ಅಂತಿಮ ದರ್ಶನ ಪಡೆದ ಹಾಗೂ ಈ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನಸಮೂಹವೇ ನಿದರ್ಶನ ಎಂದರು.
ಅಳದಂಗಡಿ ಅರಮನೆಯ ಅರಸ ಡಾ.ಪದ್ಮಪ್ರಸಾದ ಅಜಿಲ ಮಾತನಾಡಿ, ಬಂಗೇರರು ಬೆಳ್ತಂಗಡಿಯ ಆಪತ್ಭಾಂಧವರಾಗಿದ್ದರು. ಯಾರೇ ಕಷ್ಟಕ್ಕೆ ಒಳಗಾದರೂ ವೈಯಕ್ತಿಕವಾಗಿ ಸಹಾಯಕ್ಕೆ ಬರುತ್ತಿದ್ದರು. ಅಧಿಕಾರ ಇದ್ದಾಗ, ಇಲ್ಲದೇ ಇದ್ದಾಗ ಅವರ ಮನೆ ಹಾಗೂ ಕಚೇರಿಯಲ್ಲಿ ಇರುತ್ತಿದ್ದ ಜನರೇ ಅವರ ಸಹಕಾರ ಮನೋಭಾವಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸ್ವಾಗತಿಸಿ ಮಾತನಾಡಿ, ವಸಂತ ಬಂಗೇರರು ಒಬ್ಬ ವ್ಯಕ್ತಿಯಲ್ಲ, ಸಮಾಜದ ಶಕ್ತಿಯಾಗಿದ್ದರು. ಸಾಮಾನ್ಯ ವ್ಯಕ್ತಿಯ ಹೃದಯದ ನೋವನ್ನು ತಿಳಿದುಕೊಂಡಿದ್ದರು. ಜನರಿಂದ ಜನರಿಗಾಗಿ ಜನರಿಗೋಸ್ಕರ ಜೀವನ ಮೀಸಲಾಗಿರಿಸಿದ ನಾಯಕ ಅವರು ಎಂದರು.
ನಾಮದೇವ್ ರಾವ್ ಮುಂಡಾಜೆ, ಬಿ.ಎಂ.ಭಟ್, ಅತ್ರಾಡಿ ಅಮೃತ ಶೆಟ್ಟಿ, ಶಿಬಿ ಧರ್ಮಸ್ಥಳ, ಹಾಜಿ ಅಬ್ದುಲ್ ಲತೀಪ್ ಸಾಹೇಬ್, ಮನೋಹರ್‌ಕುಮಾರ್ ನುಡಿನಮನ ಸಲ್ಲಿಸಿದರು.
ವಸಂತ ಬಂಗೇರರ ಪತ್ನಿ ಸುಜಿತಾ ವಿ ಬಂಗೇರ, ಅಳಿಯ ಧರ್ಮ ವಿಜೇತ್, ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಮೂರುಗೋಳಿ ಮಸೀದಿಯ ಅತಾವುಲ್ಲಾ ಹಮಾಮಿ ಸಖಾಫಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್‌ಕುಮಾರ್ ಗೌಡ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ವಂದನಾ ಭಂಡಾರಿ ಹಾಗೂ ನಮಿತಾ ಪೂಜಾರಿ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸತೀಶ್ ಕಾಶಿಪಟ್ಣ ವಂದಿಸಿದರು. ಪದ್ಮನಾಭ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.ಒಂದು ವರ್ಷದಿಂದ ಅಜ್ಞಾತವಾಸದಂತಿದ್ದ ನಾನು ಯಾರಲ್ಲಿಗೂ ಹೋಗುತ್ತಿರಲಿಲ್ಲ. ವಸಂತ ಬಂಗೇರರ ಸಾವು ಮನಸ್ಸಿಗೆ ಬಹಳ ನೋವು ತಂದಿದೆ. ಆ ಕುಟುಂಬಕ್ಕೆ ಸಾಂತ್ವಾನ ತುಂಬಲು ಬಂದಿದ್ದೇನೆ. ಬಂಗೇರ ಮಕ್ಕಳಿಗಾಗಿ ಆಸ್ತಿ ಮಾಡದಿದ್ದರೂ ಸಮಾಜಕ್ಕೆ ಆಸ್ತಿಯಾಗಿದ್ದರು.ರಮೇಶ್ ಕುಮಾರ್, ಮಾಜಿ ಸ್ಪೀಕರ್