| ಮರಿದೇವ ಹೂಗಾರ ಬೆಳಗಾವಿ
ವಿವಿಧ ಇಲಾಖೆಗಳನ್ನು ಸಾರ್ವಜನಿಕರಿಗೆ ಹತ್ತಿರವಾಗಿಸಲು ರಾಜ್ಯ ಸರ್ಕಾರ ಆನ್ಲೈನ್ ಸೇವೆಗಳಿಗೆ ಒತ್ತು ನೀಡಿದೆ. ಹಾಗೆಯೇ ನಿಧಾನ ವೇಗದ ಸರ್ವರ್ಗಳಿಂದಾಗುತ್ತಿರುವ ತೊಂದರೆಯನ್ನೂ ಮನಗಂಡಿದೆ. ಹಾಗಾಗಿ ಕಾವೇರಿ- 2 ತಂತ್ರಾಂಶವನ್ನು ಅಳವಡಿಸಿ, 2022ರ ಜನವರಿ ಇಲ್ಲವೆ ಫೆಬ್ರುವರಿ ತಿಂಗಳಲ್ಲಿ ಸಮಸ್ಯೆಗೆ ಇತಿಶ್ರೀ ಹಾಡಲು ಅಣಿಯಾಗಿದೆ.
ಮುದ್ರಾಂಕ ಹಾಗೂ ನೋಂದಣಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಬೆಂಗಳೂರು ಬೃಹತ್ ನಗರಪಾಲಿಕೆ, ನಗರಾಭಿವೃದ್ಧಿ ಇಲಾಖೆ ಸೇರಿ ಇತರ ಇಲಾಖೆಗಳಲ್ಲಿ ತಂತ್ರಾಂಶದ ಸಮಸ್ಯೆ ಎದುರಾಗುತ್ತಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆಯಿಂದ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ ಹೆಚ್ಚಿನ ಆದಾಯ ಹರಿದುಬರುತ್ತಿದೆ. ಸರ್ವರ್ ಸಮಸ್ಯೆಯಿಂದ ಆದಾಯ ಆಕರದಲ್ಲಿ ಇಳಿಕೆ ಆಗದಿದ್ದರೂ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ಮೂಲ ಕಾವೇರಿ ತಂತ್ರಾಂಶದ ಹೊಣೆಯನ್ನು ಸಿಡಾಕ್ ಕಂಪನಿಗೆ ನೀಡಲಾಗಿದೆ. ಬೇರೆ ಬೇರೆ ಇಲಾಖೆಯ ದತ್ತಾಂಶಗಳ ಸಂಗ್ರಹದಿಂದ ಕಾವೇರಿಗೆ ಒತ್ತಡ ಹೆಚ್ಚಿದೆ. ಹಳೆಯ ತಂತ್ರಾಂಶ ಆಗಿರುವುದರಿಂದ ಮತ್ತೊಂದು ತಂತ್ರಾಂಶ ಅಭಿವೃದ್ಧಿಪಡಿಸುವ ಇಂಗಿತವನ್ನು ಕಂದಾಯ ಇಲಾಖೆ ವ್ಯಕ್ತಪಡಿಸಿತ್ತು. ಹೊಸದಾಗಿ ‘ಕಾವೇರಿ-2’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಆಸಕ್ತಿ ತೋರಿದೆ. ಎನ್ಎಸಿಎಲ್ ಕಂಪನಿಗೆ ಜವಾಬ್ದಾರಿ ನೀಡಲಾಗಿದೆ. ಕೆಲ ಮಾರ್ಪಾಟುಗಳೊಂದಿಗೆ ಮತ್ತು ಹೆಚ್ಚು ದತ್ತಾಂಶ ಸಂಗ್ರಹಿಸುವ ಉದ್ದೇಶ ಹೊತ್ತು ಕಾವೇರಿ-2 ಆಗಮಿಸಲಿದ್ದು, ಸದ್ಯ ಆರ್ಡಿಪಿಆರ್ ಹಾಗೂ ನಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ಹೊರಲಿದೆೆ.
ಸರ್ವರ್ ನಿಧಾನ ವೇಗದಿಂದ ಜನರಿಗೆ ಸಮಸ್ಯೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಸಿಡಾಕ್ ಕಂಪನಿ ಜತೆ ಮಾಡಿಕೊಂಡಿ ರುವ ಒಪ್ಪಂದದಿಂದಾಗಿ ಇನ್ನೂ 6 ತಿಂಗಳು ಕೆಲಸ ಮಾಡಲು ಅವಧಿ ನೀಡಲಾಗಿದೆ. ಕಾವೇರಿ 2 ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ. ಜನವರಿ- ಫೆಬ್ರವರಿ ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ.
| ತುಷಾರ್ ಗಿರಿನಾಥ್ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ
ಜನರಿಗೆ ಹತ್ತಿರ: ಸರ್ವರ್ ಸಮಸ್ಯೆಯನ್ನು ಅಧಿಕಾರಿಗಳಷ್ಟೇ ಎದುರಿಸುತ್ತಿಲ್ಲ, ಸಾರ್ವಜನಿಕರಿಗೂ ಸಂಕಟ ತರಿಸಿದೆ. ಮೂಲ ಕಾವೇರಿಯಲ್ಲಿ ಆಗುತ್ತಿದ್ದ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿರುವ ‘ಐಟಿ-ಬಿಟಿ’ ಇಲಾಖೆ, ಕಾವೇರಿ-2 ಮೂಲಕ ಸರಳೀಕರಣಗೊಳಿಸಲು ಮುಂದಾಗಿದೆ. ಇದರಿಂದ ರಾಜ್ಯದ ಬೊಕ್ಕಸ ಭರ್ತಿ ಮಾಡುವ ವಿವಿಧ ಇಲಾಖೆಗಳ ಸೇವೆ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ. ಜನರ ಕೈಗೆ ಫಟಾಫಟ್ ಕಾಗದಪತ್ರ ಲಭ್ಯವಾಗಲಿವೆ.
ಶೇ. 80 ಸೇವೆ: ಬೇರೆ ಬೇರೆ ಇಲಾಖೆಗಳ ಶೇ. 80 ಸೇವೆಗಳನ್ನು ಕಾವೇರಿ-2 ನೀಡಲಿದೆ. ಇದು ಒಮ್ಮೆಲೆ ಆಗುವ ಕಾರ್ಯವಲ್ಲ, ಹಂತ ಹಂತವಾಗಿ ಮೂಲ ಕಾವೇರಿಯಿಂದ ವರ್ಗಾ ವಣೆಗೊಳ್ಳಲಿದೆ. ಆರಂಭದಲ್ಲಿ ಕೆಲ ಇಲಾಖೆಯ ದತ್ತಾಂಶಗಳ ಸಂಗ್ರಹದ ಜವಾಬ್ದಾರಿ ಹೊತ್ತು ನಂತರ ಬಹಳಷ್ಟು ಇಲಾಖೆಗಳ ದತ್ತಾಂಶ ಸಂಗ್ರಹಕ್ಕೆ ಮುಂದಾಗಲಿದೆ.