ಮರವಂತೆ ಹೊರಬಂದರಿನಲ್ಲಿ ನಿಲ್ಲಿಸಿರುವ ದೋಣಿಗಳು. 
ಜಿಲ್ಲೆ

ಸಾಂಪ್ರದಾಯಿಕ ಮೀನುಗಾರಿಕೆ ವಿಳಂಬ

Avinash R

ಗಂಗೊಳ್ಳಿ: ಮುಂಗಾರು ಆರಂಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಇರುವುದರಿಂದ ಹಾಗೂ ಇನ್ನೂ ಸಮುದ್ರದಲ್ಲಿ ತೂಫಾನ್ ಆಗದೆ ಇರುವುದರಿಂದ ಈ ಬಾರಿ ನಾಡದೋಣಿ ಮೀನುಗಾರಿಕೆ ವಿಳಂಬವಾಗಿ ಆರಂಭವಾಗುವ ಸಾಧ್ಯತೆಗಳಿವೆ. ಸಮುದ್ರದ ಪರಿಸ್ಥಿತಿ ನೋಡಿಕೊಂಡು ಜುಲೈ ಮೊದಲ ವಾರ ಅಥವಾ 15ರ ನಂತರ ಕುಂದಾಪುರ, ಬೈಂದೂರು ಭಾಗದ ನಾಡದೋಣಿ ಮೀನುಗಾರರು ಕಡಲಿಗಿಳಿಯುವ ಸಾಧ್ಯತೆ ಇದೆ.

ಜೂನ್‌ನಲ್ಲಿ ಉತ್ತಮ ಮಳೆಯಾಗುತ್ತಿದ್ದರೆ ಇಷ್ಟೊತ್ತಿಗಾಗಲೇ ನಾಡದೋಣಿ ಮೀನುಗಾರರು ಕಡಲಿಗಿಳಿಯಲು ಸಜ್ಜಾಗುತ್ತಿದ್ದರು. ಆದರೆ ಈ ಬಾರಿ ಕಳೆದ ಒಂದು ವಾರದಿಂದ ಮಳೆ ಬಿರುಸು ಪಡೆದಿದ್ದು, ಇದರಿಂದ ಸಾಂಪ್ರದಾಯಕ ಮೀನುಗಾರಿಕೆ ಆರಂಭ ವಿಳಂಬಗೊಂಡಿದೆ.

ಕುಂದಾಪುರ, ಬೈಂದೂರು ಭಾಗದ ಕೋಡಿ, ಗಂಗೊಳ್ಳಿ, ಬೆಣ್ಗೆರೆ, ಕಂಚುಗೋಡು, ಹೊಸಪೇಟೆ, ಮರವಂತೆ, ತ್ರಾಸಿ, ಕೊಡೇರಿ, ಉಪ್ಪುಂದದ ಮಡಿಕಲ್, ಅಳ್ವೆಗದ್ದೆಯಲ್ಲಿ ನಾಡದೋಣಿ ಮೀನುಗಾರರಿದ್ದಾರೆ. ಉಪ್ಪುಂದ ಭಾಗದಲ್ಲಿ 1,500 ನಾಡದೋಣಿಗಳಿದ್ದರೆ, ಗಂಗೊಳ್ಳಿಯಲ್ಲಿ 300 ಸಿಂಗಲ್, 35ಕ್ಕೂ ಮಿಕ್ಕಿ ಜೋಡಿ ದೋಣಿಗಳು ಸೇರಿದಂತೆ 600ಕ್ಕೂ ಮಿಕ್ಕಿ ನಾಡದೋಣಿಗಳಿವೆ. ಮರವಂತೆಯಲ್ಲಿ 100 ಜೋಡಿ ದೋಣಿ, 150ಕ್ಕೂ ಮಿಕ್ಕಿ ಸಿಂಗಲ್ ದೋಣಿಗಳಿವೆ.

ಕಡಲಾಳದಲ್ಲಿ ತೂಫಾನ್ ಎದ್ದ ಬಳಿಕ ಕಡಲು ಪ್ರಕ್ಷುಬ್ಧಗೊಳ್ಳುತ್ತದೆ. ಇದರಿಂದ ನದಿ, ಹೊಳೆಗಳ, ನೀರು, ಅದರೊಂದಿಗೆ ತ್ಯಾಜ್ಯವೆಲ್ಲ ಸಮುದ್ರಕ್ಕೆ ಸೇರುವುದರಿಂದ ಆಹಾರಕ್ಕಾಗಿ ವಿವಿಧ ಜಾತಿಯ ಮೀನುಗಳು ಕಡಲ ತೀರದತ್ತ ಧಾವಿಸುತ್ತವೆ. ಆದರೆ ಜೂನ್‌ನಲ್ಲಿ ಕಡಿಮೆ ಮಳೆಯಾಗಿರುವುದರಿಂದ ತೂಫಾನ್ ವಿಳಂಬಗೊಂಡಿದೆ. ಜೂನ್ ಅಂತ್ಯದೊಳಗೆ ಸಮುದ್ರದಲ್ಲಿ ತೂಫಾನ್ ಏಳುವ ಸಾಧ್ಯತೆಗಳಿವೆ. ತೂಫಾನ್ ಏಳದೆ ಮೀನುಗಾರರು ಕಡಲಿಗಿಳಿದರೂ ಹೇರಳವಾಗಿ ಮೀನು ಸಿಗುವುದಿಲ್ಲ.

ಗಂಗೊಳ್ಳಿಯಲ್ಲಿ ನಾಡದೋಣಿ ಮೀನುಗಾರರೆಲ್ಲ ಸೇರಿ 29ರಂದು ಸಮುದ್ರ ದೇವರಿಗೆ ಪೂಜೆ ಸಲ್ಲಿಸಲಿದ್ದೇವೆ. ಆ ಬಳಿಕ ಪರಿಸ್ಥಿತಿ ನೋಡಿಕೊಂಡು ಜುಲೈ ಮೊದಲ ವಾರದಿಂದ ಕಡಲಿಗಿಳಿಯಲು ಸಜ್ಜಾಗಲಿದ್ದೇವೆ. ಬಂದರಿನ ಅವ್ಯವಸ್ಥೆ, ಗಂಗೊಳ್ಳಿಯ ಬಂದರು, ಅಳಿವೆ ಬಾಗಿಲಲ್ಲಿ ಡ್ರೆಜ್ಜಿಂಗ್ ಆಗದೆ ಇರುವುದರಿಂದ ಮೀನುಗಾರರು ಹಿಡಿದ ಮೀನುಗಳನ್ನು ದಡ ಸೇರಿಸುವುದೆ ಕಷ್ಟಕರ ಅನ್ನುವಂತಾಗಿದೆ. ಲೈಟ್‌ಹೌಸ್ ಬಳಿ ರಸ್ತೆಯ ಸಮಸ್ಯೆಯಿದೆ.-ಯಶವಂತ ಖಾರ್ವಿ, ನಾಡದೋಣಿ ಮೀನುಗಾರರ ಸಂಘ ಗಂಗೊಳ್ಳಿ ವಲಯ ಅಧ್ಯಕ್ಷ