ಜಿಲ್ಲೆ

ದೇವಸ್ಥಾನದ ಜಾಗ ಅತಿಕ್ರಮಣ ಮಾಡ್ಬೇಡ್ರಿ ಎಂದಿದ್ದಕ್ಕೆ ಯುವಕ ಆಸ್ಪತ್ರೆ ಸೇರಬೇಕಾಯ್ತು!

Mandara

ಬೆಳಗಾವಿ: ಗ್ರಾಮದ ದೇವರ ಜಾಗವನ್ನ ಒಳಗಾಕಿಕೊಳ್ಬೇಡ್ರಪ್ಪಾ, ದೇವಸ್ಥಾನದ ಜಾಗವನ್ನ ಬಿಟ್ಟುಬಿಡಿ ಎಂದು ಕೇಳಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ತಾಲೂಕಿನ ಗೊಂಡವಾಡ ಗ್ರಾಮದ ದೇವಸ್ಥಾನಕ್ಕೆ ಸೇರಿದ್ದ 5 ಎಕರೆ ಜಮೀನನ್ನು ಪ್ರಭಾವಿಗಳು ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಇದರ ವಿರುದ್ಧ ಕಳೆದ ಹಲವು ತಿಂಗಳಿಂದ‌‌ ಗ್ರಾಮಸ್ಥರ ಹೋರಾಟ ನಡೆಸುತ್ತಿದ್ದಾರೆ. ಗ್ರಾಮಸ್ಥರ ಪರ ನಿಂತು ಹೋರಾಡಿದ ಯುವಕ ಸತೀಶ್ ಪಾಟೀಲ್(34) ಮೇಲೆ ಹಲ್ಲೆ ನಡೆಸಲಾಗಿದೆ. ನವೆಂಬರ್ 30ರ ರಾತ್ರಿ ಹಲ್ಲೆ ನಡೆಸಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಗಜಾನನ ಬಿರ್ಜೆ, ಮಾರುತಿ ಪಾಟೀಲ್, ಕೇದಾರಿ ಪಾಟೀಲ್, ಕೃಷ್ಣಾ ಪಾಟೀಲ್ ಬಸವಂತ ಕತ್ರಾಯ್ ಎಂಬುವವರು ಹಲ್ಲೆ ನಡೆಸಿರುವುದಾಗಿ ಹೇಳಲಾಗಿದೆ. ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ. ಅವರ ಮೇಲೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ.

ಘಟನೆ ಹಿನ್ನೆಲೆ ಶಾಸಕ ಸತೀಶ್ ಜಾರಕಿಹೋಳಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಹಲ್ಲೆ ಆರೋಪಿಗಳಿಗೆ ಶಿಕ್ಷೆ ಕೊಡಿಸಿ, ಅತಿಕ್ರಮಣವಾಗಿರುವ ಜಾಗವನ್ನು ಮತ್ತೆ ದೇವಸ್ಥಾನಕ್ಕೆ ಹಿಂದಿರುಗಿಸುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.