ಆಸ್ಪತ್ರೆ ವಾರ್ಡ್​ನೊಳಗೆ ಹೊಡೆದಾಟ 
ಜಿಲ್ಲೆ

ಕಠಾರಿಪಾಳ್ಯದಲ್ಲಿ ಕಠೋರ ಹೊಡೆದಾಟ, ಐವರಿಗೆ ಗಾಯ; ಜಿಲ್ಲಾಸ್ಪತ್ರೆಯ ವಾರ್ಡ್​ನೊಳಗೂ 2 ಗುಂಪುಗಳ ಮಾರಾಮಾರಿ

ಕೋಲಾರ: ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟ, ಗುಂಪಿನ ಸದಸ್ಯರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದರೂ ಅಲ್ಲಿಯೂ ಮುಂದುವರಿದು, ಆಸ್ಪತ್ರೆಯ ವಾರ್ಡ್​ನೊಳಗೂ ಮಾರಾಮಾರಿ ನಡೆದ ಪ್ರಸಂಗವೊಂದು ವರದಿಯಾಗಿದೆ.

ಕೋಲಾರ ಜಿಲ್ಲೆಯ ಕಠಾರಿಪಾಳ್ಯದಲ್ಲಿ ಈ ಗುಂಪುಘರ್ಷಣೆ ನಡೆದಿದೆ. ಅಪರಂಜಿ ನಾರಾಯಣಸ್ವಾಮಿ ಮತ್ತು ಗಂಗಾಧರ ಎಂಬವರ ಬಣಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಗುಂಪಿನ ಸದಸ್ಯರು ಹಿಗ್ಗಾಮುಗ್ಗಾ ಹೊಡೆದಾಡಿಕೊಂಡಿದ್ದಾರೆ. ಈ ಜಗಳದಲ್ಲಿ ಐವರು ಗಾಯಗೊಂಡಿದ್ದು ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ದುರಂತವೆಂದರೆ ಆಸ್ಪತ್ರೆಗೆ ಸೇರಿದ ಮೇಲೂ ಈ ಹೊಡೆದಾಟ ಮುಂದುವರಿದಿದ್ದು, ಜಿಲ್ಲಾಸ್ಪತ್ರೆಯ ವಾರ್ಡ್​ನೊಳಗೂ ಎರಡು ಗುಂಪಿನ ಸದಸ್ಯರ ನಡುವೆ ಮಾರಾಮಾರಿ ನಡೆದಿದೆ. ಹೊಡೆದಾಟದಿಂದಾಗಿ ವಾರ್ಡ್​ನಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿದ್ದಲ್ಲದೆ, ಅಲ್ಲಿನ ಬೆಡ್​ಗಳೆಲ್ಲ ಚದುರಿಹೋಗಿವೆ.

ವಾರ್ಡ್​ ಒಳಗೆ ನಡೆದ ಹೊಡೆದಾಟದ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಮತ್ತೊಂದೆಡೆ ಕಠೋರಿಪಾಳ್ಯ ಬೂದಿಮುಚ್ಚಿದ ಕೆಂಡದಂತಾಗಿದ್ದು, ಅಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ವಹಿಸಲಾಗಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.