ಬೆಂಗಳೂರು: ಎಂಥ ಕ್ಷುಲ್ಲಕ ವಿಚಾರಗಳಿಗೆಲ್ಲ ಕೊಲೆಯಾಗಿ ಹೋಗಿಬಿಡುತ್ತದೆ ಎಂದು ಹೇಳಲಿಕ್ಕೇ ಕಷ್ಟ. ಮೊನ್ನೆಮೊನ್ನೆಯಷ್ಟೇ ಬರೀ ಆಮ್ಲೆಟ್ ವಿಚಾರಕ್ಕೆ ಒಂದು ಕೊಲೆಯಾಗಿತ್ತು. ಇದೀಗ ಮಂಚದ ಮೇಲೆ ಮಲಗುವಂಥ ಸಣ್ಣ ವಿಚಾರಕ್ಕೂ ಕೊಲೆಯೊಂದು ನಡೆದುಹೋಗಿದೆ. ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎಂಬ ನಾಣ್ಣುಡಿ ಇದೆ. ಆದರೆ ಇಲ್ಲಿ ಇಬ್ಬರ ಜಗಳವೇ ಮತ್ತೊಬ್ಬನಿಗೆ ಕೇಡಾಗಿ ಪರಿಣಮಿಸಿದೆ.
ಹೌದು.. ಕಾಟ್ ಮೇಲೆ ಮಲಗುವ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಬಿಡಿಸಲು ಹೋದ ಸಂಬಂಧಿಯೊಬ್ಬ ಕೊಲೆಗೀಡಾಗಿದ್ದಾನೆ. ಬೆಂಗಳೂರಿನ ಜೀವನ್ಬಿಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ವೆಂಕಟೇಶ್ ಎಂಬಾತ ಕೊಲೆಗೀಡಾಗಿದ್ದು, ಆತನ ಸಂಬಂಧಿ ವಿನಯ್ ಕೊಲೆ ಆರೋಪಿ.
ನಿನ್ನೆ ರಾತ್ರಿ 10.30ರ ಸುಮಾರಿಗೆ ಜೀವನ್ಬಿಮಾನಗರದ ಹನುಮನಗರದಲ್ಲಿ ಸಹೋದರರಾದ ವಿನಯ್-ಮನು ಮಧ್ಯೆ ಜಗಳ ನಡೆಯುತ್ತಿತ್ತು. ಕಾಟ್ ಮೇಲೆ ಮಲಗುವ ವಿಚಾರವಾಗಿ ನಡೆಯುತ್ತಿದ್ದ ಜಗಳ ಕೇಳಿ ಪಕ್ಕದ ಮನೆಯಲ್ಲಿ ವಾಸವಿದ್ದ ಸಂಬಂಧಿ ವೆಂಕಟೇಶ್ ಅಲ್ಲಿಗೆ ಬಂದಿದ್ದ.
ಜಗಳವಾಡುತಿದ್ದ ಅಣ್ಣ-ತಮ್ಮಂದಿರನ್ನು ವೆಂಕಟೇಶ್ ಸಮಾಧಾನ ಪಡಿಸಲು ಮುಂದಾಗಿದ್ದ. ಆಗ ಕುಡಿದ ಅಮಲಿನಲ್ಲಿದ್ದ ವಿನಯ್ ಅಲ್ಲೇ ಇದ್ದ ಗಾಜಿನ ಬಾಟಲ್ನಿಂದ ವೆಂಕಟೇಶ್ ಎದೆಗೆ ಚುಚ್ಚಿದ್ದ. ತೀವ್ರ ರಕ್ತಸ್ರಾವವಾಗಿ ವೆಂಕಟೇಶ್ ಮೃತಪಟ್ಟಿದ್ದು, ಪ್ರಕರಣ ಸಂಬಂಧ ವಿನಯ್ನನ್ನು ಜೀವನ್ಬಿಮಾನಗರ ಪೊಲೀಸರು ಬಂಧಿಸಿದ್ದಾರೆ.