ಹಾವೇರಿ: ಎಲ್ಲೆಡೆ ಲಾಕ್ಡೌನ್ ಇರುವುದರಿಂದ ಜನರು ಸಮಯ ಮೀರಿ ಬೀದಿಗಿಳಿಯತ್ತಿಲ್ಲ. ಆದರೆ ಇಲ್ಲೊಂದು ಕಡೆ ಲಾಕ್ಡೌನ್ ನಡುವೆಯೂ ಎರಡು ಕುಟುಂಬಗಳ ಸದಸ್ಯರು ನಡುರಸ್ತೆಯಲ್ಲೇ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರೂ ಹೆಂಗಸರಿಂದ ಬಡಿಗೆ ಏಟು ತಿನ್ನುವಂತಹ ಪರಿಸ್ಥಿತಿ ಉಂಟಾಗಿತ್ತು.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಳ್ಳಿಬೈಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ರವೀಂದ್ರ ಹ್ಯಾಪನವರ ಹಾಗೂ ಭೀಮರಾಮಪ್ಪ ಕಾಡನವರ ಕುಟುಂಬದವರ ನಡುವೆ ನಡುರಸ್ತೆಯಲ್ಲೇ ಹೊಡೆದಾಟ ನಡೆದಿದೆ. ರವೀಂದ್ರ ಹ್ಯಾಪನವರ ಖರೀದಿಸಿದ್ದ ಆಸ್ತಿ ಹಾಗೂ ಮನೆ ವಿಚಾರವಾಗಿ ಈ ಜಗಳ ನಡೆದಿದೆ.
ಇದನ್ನೂ ಓದಿ: ಹೆಂಡತಿಯನ್ನು ಇನ್ನೊಬ್ಬನ ಜತೆ ನೋಡಬಾರದ ಸ್ಥಿತಿಯಲ್ಲಿ ನೋಡಿದ ಗಂಡ; ಇಬ್ಬರನ್ನೂ ಹೊರಕ್ಕೆಳೆದು ಕಂಬಕ್ಕೆ ಕಟ್ಟಿ ಥಳಿಸಿದ..
ರವೀಂದ್ರ ಖರೀದಿಸಿರುವ ಜಾಗ ನಮ್ಮದು ಎಂದು ಭೀಮರಾಮಪ್ಪ ನಿನ್ನೆ ಅವರ ಮನೆ ಎದುರಿನ ಖಾಲಿ ಜಾಗದಲ್ಲಿ ಟೆಂಟ್ ಹಾಕಿದ್ದರು. ಈ ಸಂಬಂಧ ಎರಡೂ ಕುಟುಂಬದವರ ನಡುವೆ ಇಂದು ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಈ ವೇಳೆ ಎರಡೂ ಕುಟುಂಬಸ್ಥರು ಬಡಿಗೆ ಹಿಡಿದು ಬಡಿದಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ರವೀಂದ್ರ ಹಾಗೂ ಅವರ ಪತ್ನಿ ಮಮತಾಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಪೊಲೀಸರು ಧಾವಿಸಿದ್ದರು. ಆಗ ಕೆಲವರು ಪೊಲೀಸರ ವಿರುದ್ಧವೇ ಹರಿಹಾಯ್ದ ಪ್ರಸಂಗವೂ ನಡೆದಿದೆ. ಹೀಗಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ವಿಧಿಸಲಾಗಿದೆ. ಅಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.