ಜಿಲ್ಲೆ

ಮಗನ ಕಣ್ಣೆದುರೇ ಸಿಡಿಲೆರಗಿ ಸ್ಥಳದಲ್ಲೇ ಮೃತಪಟ್ಟ ತಂದೆ: ಮಳೆಯಲ್ಲೇ ಹೋದರೆ ಅಪಾಯ ಎಂದು ಮರದ ಕೆಳಗೆ ನಿಂತಾಗ ಅವಘಡ

ಬೆಂಗಳೂರು: ನೈಸ್ ರಸ್ತೆಯಲ್ಲಿ ಮಳೆ ಜೋರಾಗಿ ಸುರಿದ ಹಿನ್ನೆಲೆಯಲ್ಲಿ ಮರದ ಕೆಳಗೆ ನಿಂತಿದ್ದ ತರಕಾರಿ ವ್ಯಾಪಾರಿಗೆ ಸಿಡಿಲು ಬಡಿದು ಮೃತಪಟ್ಟರೆ, ಆತನ ಪುತ್ರ ಗಂಭೀರವಾಗಿ ಗಾಯಗೊಂಡಿದ್ದಾನೆ.

ತುಮಕೂರು ಮೂಲದ ಟಿ.ದಾಸರಹಳ್ಳಿಯ ನಿವಾಸಿ ತರಕಾರಿ ವ್ಯಾಪಾರಿ ತಿಪ್ಪೇಸ್ವಾಮಿ (46) ಮೃತಪಟ್ಟವರು. ಇವರ ಪುತ್ರ ಚಿದಾನಂದ್ (22) ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಂದೆ-ಮಗ ಇಬ್ಬರೂ ಭಾನುವಾರ ಸಂಜೆ ತಮ್ಮ ಮನೆಯಿಂದ ಚಿಕ್ಕಗೊಲ್ಲರಹಟ್ಟಿಯಲ್ಲಿರುವ ಸಂಬಂಧಿಕರ ಮನೆಗೆ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ಬ್ಯಾಡರಹಳ್ಳಿ ಬಳಿಯ ನೈಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಜೋರಾಗಿ ಮಳೆ ಸುರಿದ ಕಾರಣ ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಮರದ ಕೆಳಗೆ ಆಶ್ರಯ ಪಡೆದಿದ್ದರು.

ಆ ವೇಳೆ ಇಬ್ಬರಿಗೂ ಸಿಡಿಲು ಬಡಿದಿದೆ. ಪರಿಣಾಮ ತಿಪ್ಪೇಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಬ್ಯಾಡರಹಳ್ಳಿ ಠಾಣೆಯ ಹೊಯ್ಸಳ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡ ಚಿದಾನಂದ್‌ನನ್ನು ಗಮನಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.