ಕೋಣ್ಕಿ- ಕುಡ್ಗಿತ್ಲುವಿನಲ್ಲಿ ರೈತರೇ ಹಣ ಒಟ್ಟು ಮಾಡಿ, ಕೆರೆ ಬದಿಯ ಹೂಳೆತ್ತಿ ಇತರರಿಗೆ ಮಾದರಿಯಾಗಿದ್ದಾರೆ. 
ಜಿಲ್ಲೆ

ಸ್ವಂತ ಖರ್ಚಿನಲ್ಲಿ ಕಾಲುವೆ ಹೂಳೆತ್ತಿದ ರೈತರು: ಮನವಿಗಳಿಗೆ ಕ್ಯಾರೇ ಎನ್ನದ ಅಧಿಕಾರಿಗಳು

ಗಂಗೊಳ್ಳಿ: ಕೋಣ್ಕಿ-ಕುಡ್ಗಿತ್ಲುವಿನಲ್ಲಿರುವ ಕೆರೆ ಬದಿಯ ಕಾಲುವೆಯಲ್ಲಿ (ತೋಡು)ಹೂಳು ತುಂಬಿ ಹೋಗಿದ್ದು, ಸ್ವಚ್ಛಗೊಳಿಸುವಂತೆ ಕಳೆದ ಐದಾರು ವರ್ಷಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ ಈ ಅಧಿಕಾರಿಗಳು ಕೆರೆಯ ಹೂಳೆತ್ತಿ ಸ್ವಚ್ಛಗೊಳಿಸುವ ಕೆಲಸವನ್ನು ಇಂದು ಮಾಡಿಕೊಡುತ್ತಾರೆ, ನಾಳೆ ಮಾಡಿಕೊಡುತ್ತಾರೆ ಎಂದು ಕಾದು ಕಾದು ಹೈರಾಣಾದ ರೈತರು ಕೊನೆಗೆ ತಾವೇ ಹಣ ಹೊಂದಿಸಿ ಹೂಳೆತ್ತುವ ಕೆಲಸಕ್ಕೆ ಮುಂದಾಗಿದ್ದಾರೆ.

ಹೂಳು ತುಂಬಿಕೊಂಡ ಕಾಲುವೆ

ಕೋಣ್ಕಿ- ಕುಡ್ಗಿತ್ಲು ಕೆರೆ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಕೆರೆ ಬದಿಯ ಕಾಲುವೆ (ತೋಡು) ಕಸ, ಗಿಡಗಂಟಿಗಳಿಂದ ತುಂಬಿಕೊಂಡಿದ್ದಲ್ಲದೆ, ಹೂಳು ತುಂಬಿಕೊಂಡಿತ್ತು. ಇದರಿಂದ ಈ ಕಾಲುವೆಯಲ್ಲಿ ಮಳೆ ನೀರು ಸರಾಗ ಹರಿದು ಹೋಗಲು ಸಮಸ್ಯೆಯಾಗುತ್ತಿತ್ತು. ಈ ಭಾಗದ ಮಳೆ ನೀರು ಹರಿದು ಸೌಪರ್ಣಿಕಾ ನದಿಗೆ ಸೇರಲು ಇರುವುದು ಇದೊಂದೇ ತೋಡು. ಇದರಿಂದ ಪ್ರತಿ ವರ್ಷ ಇಲ್ಲಿ ಕೃತಕ ನೆರೆ ಉಂಟಾಗಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡು, ಬೆಳೆ ನಾಶವಾಗುತ್ತಿತ್ತು. ಮುಂಗಾರಿನಲ್ಲಿ ಬೆಳೆದ ಬೆಳೆ ಪೂರ್ತಿ ಮಳೆಗೆ ಆಹುತಿಯಾಗುತ್ತಿತ್ತು. ಇದೀಗ ರೈತರೇ ಹಣ ಒಟ್ಟು ಮಾಡಿ, ಕೆರೆ ಬದಿಯ ಹೂಳೆತ್ತಿ ಮಳೆಗಾಲದಲ್ಲಿ ಕೃತಕ ನೆರೆಯಾಗುವುದನ್ನು ತಪ್ಪಿಸುವ ಕೆಲಸ ಮಾಡಿದ್ದಾರೆ.

ಕಾಲುವೆ ಕಸ ತುಂಬಿ ಬೆಳೆ ಹಾನಿ

ಕೋಣ್ಕಿ ಹಾಗೂ ಕುಡ್ಗಿತ್ಲು ಎರಡೂ ಪ್ರದೇಶಗಳು ಸೇರಿ ನೂರಾರು ಎಕರೆ ಗದ್ದೆಗಳಿದ್ದು, ಸುಮಾರು 100ಕ್ಕೂ ಮಿಕ್ಕಿ ರೈತರು ಮುಂಗಾರಿನಲ್ಲಿ ಭತ್ತದ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ಕಾಲುವೆಯಲ್ಲಿ ಹೂಳು ತುಂಬಿ, ರೈತರು ಲಾಭಕ್ಕಿಂತ ನಷ್ಟವನ್ನೇ ಅನುಭವಿಸುವಂತಾಗಿತ್ತು. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಪಂಚಾಯಿತಿಗೆ ಅನೇಕ ಬಾರಿ ಈ ಕಾಲುವೆಯ ಹೂಳೆತ್ತಿ, ಕಸ, ಗಿಡಗಂಟಿ ತೆಗೆಯಲು ಮನವಿ ಕೊಟ್ಟರೂ, ಯಾರೂ ಕೂಡ ಈ ಬಗ್ಗೆ ಸ್ಪಂದಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸರ್ಕಾರಕ್ಕೂ ಅಧಿಕಾರಿಗಳಿಗೂ ಕಾಯದೆ ತಾವೇ ತಮ್ಮ ಸ್ವಂತ ಖರ್ಚಿನಲ್ಲಿ ಕಾಲುವೆ ಹೂಳೆತ್ತುವ ಮೂಲಕ ಕೋಣ್ಕಿ-ಕುಡ್ಗಿತ್ಲು ರೈತರು ಮಾದರಿಯಾಗಿದ್ದಾರೆ.

ನಾವು ಅನೇಕ ವರ್ಷಗಳಿಂದ ಈ ಕಾಲುವೆಯ ಹೂಳೆತ್ತಿ ಸ್ವಚ್ಛ ಮಾಡಲು ಮನವಿ ಮಾಡಿಕೊಂಡಿದ್ದೆವು. ಆದರೆ ಈವರೆಗೆ ಯಾರೂ ಆ ಕೆಲಸ ಮಾಡಿಲ್ಲ. ಅದಕ್ಕೆ ನಾವೇ ರೈತರೆಲ್ಲ ಒಟ್ಟಾಗಿ, ಹಣ ಒಟ್ಟು ಮಾಡಿ, ಜೆಸಿಬಿ ಮೂಲಕ ಕೆರೆಯ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದೇವೆ. ಇದರಿಂದ ಮುಂಗಾರು ಹಂಗಾಮಿನ ಕೃಷಿ ಕಾರ್ಯಕ್ಕೆ ಅನುಕೂಲವಾಗಲಿದೆ. -ರಾಘವೇಂದ್ರ ಮೊಗವೀರ ಕೋಣ್ಕಿ, ರೈತ