ಜಿಲ್ಲೆ

ನೀರುಪಾಲಾಗಿದ್ದ ಅರ್ಜುನ್‌ಗೆ ನಾಡಿನ ವಿದಾಯ

Avinash R

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕಾರವಾರದ ಶಿರೂರಿನ ಗಂಗಾವಳಿ ಹೊಳೆಯಲ್ಲಿ ನೀರುಪಾಲಾಗಿದ್ದ ಲಾರಿಯೊಳಗೆ ಚಿರನಿದ್ರೆಗೆ ಜಾರಿದ್ದ ಕೋಯಿಕ್ಕೋಡು ಕಣ್ಣಾಡಿಕ್ಕಲ್ ನಿವಾಸಿ ಅರ್ಜುನ್ ಮೃತದೇಹವನ್ನು 75 ದಿವಸಗಳ ನಂತರ ಹುಟ್ಟೂರಿಗೆ ತಲುಪಿಸಲಾಗಿದೆ.

ಅರ್ಜುನ್ ನಿರಂತರ ತನ್ನ ಲಾರಿ ಮೂಲಕ ಪ್ರಯಾಣಿಸುತ್ತಿದ್ದ ಅದೇ ಹಾದಿಯಾಗಿ ಕಾರವಾರದಿಂದ ಕಾಸರಗೋಡು ಮೂಲಕ ಕೋಯಿಕ್ಕೋಡಿಗೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ತಲುಪಿಸಲಾಯಿತು. ಕೋಯಿಕ್ಕೋಡಿನ ಅಯಿಯೂರಿನಲ್ಲಿ ಸಚಿವ ಎ.ಕೆ ಶಶೀಂದ್ರನ್ ಅರ್ಜುನ್ ಮೃತದೇಹವನ್ನು ಬರಮಾಡಿಕೊಂಡರು.

ಡಿಎನ್‌ಎ ಪರೀಕ್ಷೆ ಬಳಿಕ ಕಾರವಾರದ ಜನರಲ್ ಆಸ್ಪತ್ರೆಯಿಂದ ಶುಕ್ರವಾರ ಸಂಜೆ 7.15ಕ್ಕೆ ಮೃತದೇಹ ಹೊತ್ತು ಹೊರಟಿದ್ದ ಆಂಬುಲೆನ್ಸ್ ಶನಿವಾರ ನಸುಕಿನ 2.30ಕ್ಕೆ ಕಾಸರಗೋಡು ತಲುಪಿತ್ತು. ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ. ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿ ಮೃತದೇಹಕ್ಕೆ ಪುಷ್ಪಚಕ್ರವಿರಿಸಿ ಅಂತಿಮದರ್ಶನ ಪಡೆದರು. ಆಂಬುಲೆನ್ಸ್‌ನಲ್ಲಿ ಅರ್ಜುನ್ ಸಹೋದರ ಅಭಿಜಿತ್, ಸಹೋದರಿ ಪತಿ ಜಿತಿನ್ ಜತೆಗಿದ್ದರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕಾರವಾರ ಶಾಸಕ ಸತೀಶ್‌ಕೃಷ್ಣ ಸೈಲ್ ತಮ್ಮ ವಾಹನದಲ್ಲಿ ಕಣ್ಣಾಡಿಕ್ಕಲ್‌ವರೆಗೂ ತೆರಳಿದರು. ಹುಟ್ಟೂರಲ್ಲಿ ಅರ್ಜುನ್ ಅವರ ಮೃತದೇಹದ ಅಂತಿಮ ಸಂಸ್ಕಾರ ನೆರವೇರಿತು.