

ಪುತ್ತೂರು ಗ್ರಾಮಾಂತರ: ನ್ಯಾಯಬೆಲೆ ಅಂಗಡಿಗೆ ಪಡಿತರ ಪಡೆಯಲು ಬಂದಿದ್ದ ತನ್ನ ಮೈಮೇಲೆ ನ್ಯಾಯ ಬೆಲೆ ಅಂಗಡಿಯ ಸಿಬ್ಬಂದಿ ಕೈಹಾಕಿ ಮಾನಭಂಗಕ್ಕೆ ಯತ್ನಿಸಿರುವುದಾಗಿ ಆರೋಪಿಸಿ, ಮಹಿಳೆಯೊಬ್ಬರು ಸಂಪ್ಯ ಪೊಲೀಸರಿಗೆ ದೂರು ನೀಡಿದ ಹಾಗೂ ಕೆದಂಬಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಹಾಗೂ ಊರಿನ ಪ್ರಮುಖರು ಸೇರಿ ಪ್ರಕರಣ ಮಾತುಕತೆಯ ಮೂಲಕ ಸುಖಾಂತ್ಯಗೊಳಿಸಿದ ಘಟನೆ ಶುಕ್ರವಾರ ಕೆಯ್ಯೂರು ಗ್ರಾಮದ ಮಾಡಾವಿನಲ್ಲಿ ನಡೆದಿದೆ.
ಕೆದಂಬಾಡಿ ಪ್ರಾಥಮಿಕ ಸಹಕಾರಿ ಸಂಘದ ಕೆಯ್ಯೂರಿನಲ್ಲಿರುವ ಶಾಖೆಯಲ್ಲಿ ಪಡಿತರ ಪಡೆಯಲು ಹೋಗಿದ್ದ ವೇಳೆ ಸಿಬ್ಬಂದಿ ಮಾನಭಂಗಕ್ಕೆ ಯತ್ನಿಸಿರುವುದಾಗಿ ಆರೋಪಿಸಿದ್ದರು. ಸಂಪ್ಯ ಪೊಲೀಸರು ಅಲ್ಲಿಗೆ ತೆರಳಿ ಸಿಬ್ಬಂದಿಯನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದ್ದರು ಎಂದರು ತಿಳಿದು ಬಂದಿದೆ.
ತಾನು ತಪ್ಪು ಮಾಡಿಲ್ಲ. ಅಕ್ಕಿ ತೂಕ ಮಾಡಿಕೊಡುವ ವೇಳೆ ಚೀಲ ಆಕೆಯ ಮೈಗೆ ತಾಗಿರಬಹುದು. ಅದನ್ನು ಅವರು ತಪ್ಪಾಗಿ ತಿಳಿದುಕೊಂಡು ಆರೋಪ ಮಾಡುತ್ತಿದ್ದಾರೆ ಎಂದು ನೌಕರ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಕೆದಂಬಾಡಿ ಪ್ರಾಥಮಿಕ ಸಹಕಾರಿ ಸಂಘದ ಪ್ರಮುಖರು ಹಾಗೂ ಸ್ಥಳೀಯ ಪ್ರಮುಖರು ಸೇರಿಕೊಂಡು ಮಾತುಕತೆ ನಡೆಸಿ ಪ್ರಕರ ಸುಖಾಂತ್ಯಗೊಳಿಸಿ, ಗೊಂದಲಕ್ಕೆ ತೆರೆ ಎಳೆದಿರುವುದಾಗಿ ತಿಳಿದು ಬಂದಿದೆ.