ನೆಲ್ಯಾಡಿ: ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯ ಪಟ್ರಮೆ ಗ್ರಾಮ ವ್ಯಾಪ್ತಿಯ ಶಾಂತಿಕಾಯ ಎಂಬಲ್ಲಿನ ರಸ್ತೆ ಮೋರಿಯೊಂದರ ಬಳಿ ಮಣ್ಣು ಕುಸಿದು ಡಾಂಬರು ರಸ್ತೆಗೆ ಹಾನಿಯಾಗಿ ಅಪಾಯಕಾರಿ ಸ್ಥಿತಿ ತಲುಪಿದೆ.

ತುರ್ತು ದುರಸ್ತಿ ಆಗದಿದ್ದರೆ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. 12 ಅಡಿ ಅಗಲದ ಡಾಂಬರು ರಸ್ತೆಯಲ್ಲಿ 4 ಮೀಟರ್ ಅಂತರದಲ್ಲಿ ಎರಡು ಕಡೆ ರಸ್ತೆ ಬದಿ ಮಳೆ ನೀರಿಗೆ ಕುಸಿಯುತ್ತಿದೆ. ಒಂದು ಭಾಗದ ಮೇಲ್ಭಾಗ ಒಂದು ಅಡಿಯಷ್ಟು ಮಣ್ಣು ಸವೆದಿದೆ. ವಾಹನ ಸವಾರರು ರಸ್ತೆ ಕುಸಿತವನ್ನು ಅಂದಾಜಿಸುವಲ್ಲಿ ವಿಫಲರಾದರೆ ದುರ್ಘಟನೆ ನಡೆಯುವ ಸಾಧ್ಯತೆ ಇದೆ.
ಪಕ್ಕದ ಶಾಂತಿಕಾಯ ಓಟೆಕಜೆ ಪಂಚಾಯಿತಿ ರಸ್ತೆಯ ಏರುವಿನ ತುದಿಯಲ್ಲಿ ಬರೆ ಕುಸಿದು ಚರಂಡಿ ಮುಚ್ಚಲ್ಪಟ್ಟು ಮಳೆ ನೀರೆಲ್ಲ ಆ ರಸ್ತೆಯಲ್ಲೇ ಬಂದು ಈ ಮುಖ್ಯರಸ್ತೆ ಮೇಲೆ ಹರಿದು ಈ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಮಳೆ ಹೀಗೆ ಮುಂದುವರಿದರೆ ರಸ್ತೆ ಇನ್ನಷ್ಟು ಕುಸಿಯುವ ಸಂಭವವಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.