| ಮಲ್ಲಿಕಾರ್ಜುನ ಕೊಚ್ಚರಗಿ ಹಾಸನ
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಪಟ್ಟಿಗೆ ಅನರ್ಹರನ್ನೂ ಸೇರ್ಪಡೆ ಮಾಡಲಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ನೈಜ ಕಾರ್ವಿುಕರು ತೊಂದರೆಗೆ ಸಿಲುಕುವ ಭೀತಿ ಎದುರಾಗಿದೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಹೆಸರಿನಲ್ಲಿ ಅರ್ಹರಲ್ಲದವರೂ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಗಾರೆ, ಕಾರ್ಪೆಂಟರ್, ಲೈಟಿಂಗ್, ಪೇಂಟರ್, ಗುತ್ತಿಗೆದಾರರು, ರಸ್ತೆಗೆ ಡಾಂಬರು ಹಾಕುವ ಕಾರ್ವಿುಕರು, ಪಿಎಫ್ ಸೌಲಭ್ಯ ಪಡೆಯದ ಮೇಲ್ವಿಚಾರಕರು ಮಾತ್ರ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ನೋಂದಾಯಿತ ಒಕ್ಕೂಟಕ್ಕೆ ಒಳಪಡುತ್ತಾರೆ. ಆದರೆ ಆಟೋ ಚಾಲಕರು, ಗಾರ್ಮೆಂಟ್ಸ್ ನೌಕರರು, ತರಕಾರಿ, ಹೂವು ವ್ಯಾಪಾರಿಗಳೂ ಕಟ್ಟಡ ಕಾರ್ವಿುಕರೆಂದು ಹೇಳಿಕೊಂಡು ಕಾರ್ಡ್ ಪಡೆದಿದ್ದು, ಅಕ್ರಮಕ್ಕೆ ಕಡಿವಾಣ ಬೀಳದಿದ್ದರೆ ನೋಂದಾಯಿತರ ಸಂಖ್ಯೆ ಹೆಚ್ಚಾಗಿ ಸರ್ಕಾರದ ಸವಲತ್ತು ಅರ್ಹರಿಗೆ ದೊರೆಯುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಟ್ಟಡ ಕಾರ್ವಿುಕರು ಕೆಲಸದ ಸಮಯದಲ್ಲಿ ಅವಘಡ ಸಂಭವಿಸಿದರೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯುತ್ತಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಹಾಸನದ ಕಟ್ಟಡ ಕಾರ್ವಿುಕರು 1982ರಲ್ಲಿ ಒಕ್ಕೂಟ ರಚಿಸಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸಿದ ಹೋರಾಟದ ಫಲವಾಗಿ 1996ರಲ್ಲಿ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡ ಅವರು ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಸ್ ಆಕ್ಟ್ ಜಾರಿಗೆ ತಂದರು. ರಾಜ್ಯದ ಯಾವುದೇ ಪ್ರದೇಶದಲ್ಲಿ 10 ಲಕ್ಷ ರೂ.ಗಿಂತ ಅಧಿಕ ವೆಚ್ಚದ ಕಟ್ಟಡ ನಿರ್ವಿುಸುವುದಾದರೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಒಕ್ಕೂಟಕ್ಕೆ ಶೇ.1 ರಷ್ಟು ಸೆಸ್ ಪಾವತಿಸಬೇಕೆಂಬ ಕಾನೂನು ಜಾರಿಗೆ ತಂದಿದ್ದು ಇಂದಿಗೂ ಚಾಲ್ತಿಯಲ್ಲಿದೆ. ವಾರ್ಷಿಕ 300 ಕೋಟಿ ರೂ. ಸೆಸ್ ಸಂಗ್ರಹವಾಗುತ್ತಿದೆ. ಕಾರ್ವಿುಕ ಇಲಾಖೆ ಅಧೀನಕ್ಕೆ ಒಳಪಡುವ ಒಕ್ಕೂಟದಲ್ಲಿ ಸದ್ಯ 8 ಸಾವಿರ ಕೋಟಿ ರೂ. ಸೆಸ್ ಹಣವಿದೆ. ಆದರೆ ಸರ್ಕಾರಗಳು ಜಾರಿಗೊಳಿಸುವ ವಿವಿಧ ಯೋಜನೆಗಳಿಗೆ ಈ ಅನುದಾನವನ್ನೇ ಬಳಸಿಕೊಳ್ಳಲಾಗುತ್ತಿದೆ. ಕೆಎಸ್ಆರ್ಟಿಸಿ ನೌಕರರ ಬೇಡಿಕೆ ಈಡೇರಿಸಲು ಇಲ್ಲಿಂದಲೇ ಸಾವಿರ ಕೋಟಿ ರೂ. ಪಡೆಯಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಖೇಲೋ ಇಂಡಿಯಾ ಗೇಮ್ಸ್ಗೆ ಮಲ್ಲಕಂಬ ಸ್ಪರ್ಧೆ ಸೇರ್ಪಡೆ
2006ರಲ್ಲಿ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಒಕ್ಕೂಟಕ್ಕೆ ಕಾರ್ವಿುಕರನ್ನು ಸೇರ್ಪಡೆಗೊಳಿಸಲು ಚಾಲನೆ ನೀಡಿದರು. ಆಗ 25 ಲಕ್ಷ ಕಾರ್ವಿುಕರು ನೋಂದಣಿಯಾಗಿದ್ದರು. ಕರೊನಾ ಅವಧಿಯಲ್ಲಿ ಅಂದರೆ, 2020ನೇ ಸಾಲಿನಲ್ಲಿ ಅದು 37 ಲಕ್ಷಕ್ಕೆ ಏರಿಕೆಯಾಗಿದೆ. ಒಕ್ಕೂಟ ನಡೆಸಿದ ಸರ್ವೆ ಪ್ರಕಾರ ಹಾಸನ ಜಿಲ್ಲೆಯಲ್ಲಿ 48 ಸಾವಿರ ಕಾರ್ವಿುಕರಿದ್ದಾರೆ. ಆದರೆ ಲಕ್ಷಕ್ಕೂ ಹೆಚ್ಚು ಜನ ಅನಧಿಕೃತ ಪ್ರವೇಶ ಪಡೆದಿದ್ದಾರೆ. ಕರೊನಾ ಲಾಕ್ಡೌನ್ ವೇಳೆ ಆಟೋ ಚಾಲಕರು, ಹೂವು, ತರಕಾರಿ ವ್ಯಾಪಾರಿಗಳಿಗೆ ಸರ್ಕಾರ ನೀಡಿದ ತಲಾ 5 ಸಾವಿರ ರೂ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಒಕ್ಕೂಟಕ್ಕೆ ಸೇರಿದ್ದಾಗಿದೆ. ಸುಮಾರು 2.5 ಸಾವಿರ ಕೋಟಿ ರೂ. ಆದಾಯ ತೆರಿಗೆ ಪಾವತಿಸಿರುವ ಒಕ್ಕೂಟದ ಹಣ ದಿನದಿಂದ ದಿನಕ್ಕೆ ಖಾಲಿಯಾಗುವ ಆತಂಕ ಕಾಡುತ್ತಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಇದೇ ರೀತಿಯಾಗಿ ಒಕ್ಕೂಟ ಬಾಗಿಲು ಹಾಕಿದೆ ಎಂದು ಗುತ್ತಿಗೆದಾರ ಎಚ್.ಟಿ. ರಾಮೇಗೌಡ ಹೇಳಿದರು.
ಕಾರ್ವಿುಕ ಇಲಾಖೆಯಲ್ಲಿ ಸದಸ್ಯತ್ವ ಪಡೆದರೆ ಸರ್ಕಾರದ ವಿವಿಧ ಸೌಲಭ್ಯಗಳು ದೊರೆಯಲಿವೆ ಎಂಬ ಕಾರಣಕ್ಕೆ ಎಲ್ಲರೂ ಇದರ ಕಡೆಗೆ ಗಮನ ಹರಿಸುತ್ತಿದ್ದಾರೆ. ವ್ಯಕ್ತಿ ಅಪಘಾತದಲ್ಲಿ ಮೃತನಾದರೆ 5 ಲಕ್ಷ ರೂ., ಗಂಭೀರ ಗಾಯ ಪ್ರಕರಣಕ್ಕೆ ವೈದ್ಯಕೀಯ ವೆಚ್ಚಕ್ಕಾಗಿ 2 ಲಕ್ಷ ರೂ., ಮಕ್ಕಳ ಶೈಕ್ಷಣಿಕ ಧನಸಹಾಯ (ಇಬ್ಬರಿಗೆ ತಲಾ 40 ಸಾವಿರ ರೂ.), ಹೆರಿಗೆ ಭತ್ಯೆ, ಮನೆ ನಿರ್ವಣಕ್ಕೆ ಸಹಾಯಧನ, ಪಿಂಚಣಿ... ಹೀಗೆ ವಿವಿಧ ಸವಲತ್ತುಗಳಿದ್ದು ಯಾವುದೇ ಖರ್ಚಿಲ್ಲದೆ ಇಷ್ಟೆಲ್ಲ ಸೌಲಭ್ಯ ಸಿಗುತ್ತದೆ ಎಂಬ ಕಾರಣಕ್ಕೆ ಅರ್ಹರಲ್ಲದವರೂ ಸದಸ್ಯತ್ವ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆತ್ತಲೆ ಫೋಟೋ ಕಳುಹಿಸುವಂತೆ ಬ್ಲ್ಯಾಕ್ಮೇಲ್ : ಇನ್ಸ್ಟಾಗ್ರಾಂ ಖಾತೆ ತೆರೆದು ಗಾಬರಿಗೊಳಗಾದ 13ರ ಬಾಲಕಿ!
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ನೋಂದಾಯಿತ ಸಂಘಗಳ ಒಕ್ಕೂಟಕ್ಕೆ ನೋಂದಣಿ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಯುತ್ತಿದ್ದು, ಕಾರ್ವಿುಕ ಇಲಾಖೆ ಅಧಿಕಾರಿಗಳು ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸದೆ ಒಪ್ಪಿಗೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯಾವುದೇ ವ್ಯಕ್ತಿ ಸದಸ್ಯತ್ವ ಪಡೆಯಲು ವರ್ಷದಲ್ಲಿ 90 ದಿನ ಕಟ್ಟಡ ಕಾಯಕದಲ್ಲಿ ತೊಡಗಿರುವ ಕುರಿತು ಗುತ್ತಿಗೆದಾರ ಅಥವಾ ಮನೆ ಮಾಲೀಕನಿಂದ ಪತ್ರ ಪಡೆದಿರಬೇಕು. ಗುತ್ತಿಗೆದಾರರ ಹೆಸರು, ವಿಳಾಸ ಹಾಗೂ ತನ್ನ ವಿಳಾಸ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಕುಟುಂಬದ ಮಾಹಿತಿ ಜತೆಗೆ 25 ರೂ. ಶುಲ್ಕ ಪಾವತಿಸಿದರೆ ನೋಂದಣಿಯಾಗುತ್ತದೆ. ಸಲ್ಲಿಕೆಯಾದ ಅರ್ಜಿಗಳನ್ನು ಕಾರ್ವಿುಕ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಅಪ್ರೂವ್ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಅಧಿಕಾರಿಗಳ ಪರಿಶೀಲನೆ ತಡವಾದರೆ ಮೂವತ್ತು ದಿನಗಳಲ್ಲಿ ನೋಂದಣಿಯಾಗಿರುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿರುವುದರಿಂದ ವ್ಯಕ್ತಿಯೊಬ್ಬ ಒಂದರಿಂದ ಎರಡು ಗಂಟೆ ಸಮಯ ವ್ಯಯಿಸಿದರೆ ಯಾವುದೇ ಶ್ರಮವಿಲ್ಲದೆ ಸರ್ಕಾರದ ಸವಲತ್ತಿಗೆ ಅರ್ಹನಾಗುತ್ತಾನೆ.
ಕಾರ್ವಿುಕರ ನೋಂದಣಿ ವಿಚಾರವಾಗಿ ಗುರುತರ ಆರೋಪ ಕೇಳಿಬಂದರೂ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಕಾರ್ವಿುಕ ಇಲಾಖೆ ಮುಂದಾಗಿಲ್ಲ. ಕಾರ್ವಿುಕ ಸಚಿವ ಶಿವರಾಮ್ ಹೆಬ್ಬಾರ್ ಪ್ರಕರಣದ ತನಿಖೆ ನಡೆಸಿ ಅನರ್ಹರನ್ನು ಪಟ್ಟಿಯಿಂದ ಕೈಬಿಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ನಂತರದ ಯಾವ ಬೆಳವಣಿಗೆಯೂ ಆಗಿಲ್ಲ. ಇಲಾಖೆ ಕಾರ್ಯದರ್ಶಿ ಜತೆಗೆ, ಕಾರ್ವಿುಕರು ಸಾಕಷ್ಟು ಚರ್ಚೆ ನಡೆಸಿದ್ದರೂ ಪಾರದರ್ಶಕತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ.
ನೋಂದಣಿ ಪ್ರಕ್ರಿಯೆ ಸರಳೀಕರಣ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಂದ ನೈಜ ಕಾರ್ವಿುಕರು ತೊಂದರೆಗೆ ಸಿಲುಕಿದ್ದಾರೆ. ಜಿಲ್ಲೆಯ ಎಷ್ಟೋ ಗಾರೆ ಕೆಲಸದವರು ಇನ್ನೂ ಸದಸ್ಯತ್ವ ಪಡೆದಿಲ್ಲ. ಆದರೆ ಆಟೋ ಚಾಲಕರು ಸದಸ್ಯರಾಗಿದ್ದಾರೆ. ಕಟ್ಟಡ ಕಾರ್ವಿುಕರ ಅನುಕೂಲಕ್ಕಾಗಿ ಸಾಕಷ್ಟು ಹೋರಾಟದ ಮೂಲಕ ಒಕ್ಕೂಟ ರಚನೆ ಮಾಡಿದ್ದೇವೆ. ಆದರೆ ಕೆಲವೇ ವರ್ಷಗಳಲ್ಲಿ ಅದು ದಾರಿ ತಪ್ಪಿರುವುದು ಶೋಚನೀಯ.| ಎಚ್.ಟಿ.ರಾಮೇಗೌಡ ಗುತ್ತಿಗೆದಾರ ಹಾಗೂ ಜಿಲ್ಲಾಧ್ಯಕ್ಷ, ರಾಜ್ಯ ಕಟ್ಟಡ ಕಾರ್ವಿುಕರ ಸಂಘನಿತ್ಯ ಹತ್ತಾರು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾರಣ ಸೂಕ್ಷ್ಮಪರಿಶೀಲನೆ ಸಾಧ್ಯವಾಗುತ್ತಿಲ್ಲ. ಅನರ್ಹರು ಸದಸ್ಯತ್ವ ಪಡೆಯುತ್ತಿದ್ದಾರೆಂಬ ಆರೋಪ ಕೇಳಿಬಂದಿದೆಯಾದರೂ ಇಲ್ಲಿಯವರೆಗೆ ಕಚೇರಿಗೆ ಬಂದು ಯಾರೂ ಹೇಳಿಲ್ಲ. ಯಾರಾದರೂ ದೂರು ಕೊಟ್ಟರೆ ಪರಿಶೀಲಿಸಿ ಅಂಥವರ ಕಾರ್ಡ್ ರದ್ದುಪಡಿಸಲಾಗುವುದು.| ರಾಮಕೃಷ್ಣ ಜಿಲ್ಲಾ ಕಾರ್ವಿುಕ ಅಧಿಕಾರಿ