ಉತ್ತರಕನ್ನಡ: ರಾಜ್ಯದಾದ್ಯಂತ ವಿಧಾನ ಪರಿಷತ್ ಚುನಾವಣೆ ಸಲುವಾಗಿ ಬಿರುಸಾದ ರಾಜಕೀಯ ಚಟುವಟಿಕೆ ನಡೆಯುತ್ತಿದ್ದರೆ ಇಲ್ಲೊಬ್ಬರು ಮಾಜಿ ಎಂಎಲ್ಸಿಗೆ ಬಂಧನದ ಭೀತಿ ಕಾಡಲಾರಂಭಿಸಿದೆ. ಯಾವ ಕ್ಷಣದಲ್ಲಿ ಬಂಧನವಾಗುವುದೋ ಎಂಬ ಭಯದಲ್ಲಿ ಅವರಿದ್ದಾರೆ ಎನ್ನಲಾಗಿದೆ.
ಸದ್ಯ ಬಂಧನದ ಭೀತಿ ಎದುರಿಸುತ್ತಿರುವ ಈ ಮಾಜಿ ಎಂಎಲ್ಸಿಯ ಹೆಸರು ಶ್ರೀಕಾಂತ ಘೋಟ್ನೇಕರ. ಉತ್ತರಕನ್ನಡ ಜಿಲ್ಲೆಯ ಕಾರವಾರದ ಇವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2019ರ ಸೆ. 11ರಂದು ದಾಖಲಾಗಿದ್ದ ಈ ದೂರಿನ ಹಿನ್ನೆಲೆಯಲ್ಲಿ ಬಂಧನವಾಗುವ ಸಾಧ್ಯತೆ ಇರುವುದರಿಂದ ಇವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಆದರೆ ವಿಧಾನಪರಿಷತ್ ಮಾಜಿ ಸದಸ್ಯ ಶ್ರೀಕಾಂತ ಘೋಟ್ನೇಕರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕಾರವಾರ ಸೆಷನ್ಸ್ ನ್ಯಾಯಾಲಯ ಇಂದು ತಿರಸ್ಕರಿಸಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಇವರ ಬಂಧನವಾದರೂ ಅಚ್ಚರಿ ಏನಿಲ್ಲ. ಅದೇ ಕಾರಣಕ್ಕೆ ಮಾಜಿ ಎಂಎಲ್ಸಿ ವಿಚಲಿತಗೊಂಡಿದ್ದಾರೆ ಎನ್ನಲಾಗಿದೆ.
ಮದುವೆಯೊಂದರ ವಿಚಾರದಲ್ಲಿ ಶ್ರೀಕಾಂತ ಜಾತಿನಿಂದನೆ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲೇ ಜಾತಿ ಹೆಸರಲ್ಲಿ ನಿಂದಿಸಿದ್ದರು ಎಂಬುದಾಗಿ ವಿನೋಧ ಮಹಾದೇವ ತೇಗನಳ್ಳಿ ಅವರು 2019ರಲ್ಲಿ ಶ್ರೀಕಾಂತರ ವಿರುದ್ಧ ದೂರು ದಾಖಲಿಸಿದ್ದರು.