ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ಹಲ್ಲೆ ದೃಶ್ಯ 
ಜಿಲ್ಲೆ

ಮಾಜಿ ಶಾಸಕರ ಪುತ್ರನಿಂದ ಉದ್ಯಮಿಯ ಪುತ್ರನ ಮೇಲೆ ಹಲ್ಲೆ; ಕಾರ್​ ಪಾರ್ಕಿಂಗ್ ವಿಚಾರವಾಗಿ ರೈ ಜತೆ ಹೊಯ್​ ಕೈ

ಬೆಂಗಳೂರು: ರಾಜಕಾರಣಿಯೊಬ್ಬರ ಪುತ್ರ ಉದ್ಯಮಿಯೊಬ್ಬರ ಪುತ್ರನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪಾರ್ಕಿಂಗ್ ವಿಚಾರವಾಗಿ ನಡೆದ ಈ ಗಲಾಟೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದೆ. ಈ ನಡುವೆ ಎರಡೂ ಕಡೆಯವರ ನಡುವೆ ರಾಜಿ ಯತ್ನವೂ ನಡೆಯುತ್ತಿದೆ ಎನ್ನಲಾಗಿದೆ.

ಮಾಜಿ ಶಾಸಕ, ಸದ್ಯ ಹಣ್ಣಿ ಗಣಿ ಅಧ್ಯಕ್ಷರಾಗಿರುವ ಮಾನಪ್ಪ ವಜ್ಜಲ್ ಅವರ ಪುತ್ರ ಆಂಜನೇಯ ವಜ್ಜಲ್ ಅವರ ವಿರುದ್ಧ ಈ ಹಲ್ಲೆ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ವಸಂತನಗರ ಎಂಬೆಸಿ ಅಪಾರ್ಟ್​ಮೆಂಟ್​ ಬಳಿ ಈ ಜಗಳ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲೂ ಸೆರೆಯಾಗಿದೆ.

ಆಂಜನೇಯ ವಜ್ಜಲ್ ಎಂಬೆಸಿ ಹ್ಯಾಬಿಟ್ಯಾಟ್​ನಲ್ಲಿ ವಾಸ ಮಾಡುತ್ತಿದ್ದು, ಕಳೆದ ಭಾನುವಾರ ಉದ್ಯಮಿ ದೀಪಕ್ ರೈ ಅವರ ಪುತ್ರ ವಿಕ್ರಮ್ ರೈ ಆ ಅಪಾರ್ಟ್​ಮೆಂಟ್​ ಬಳಿ ಕಾರು ಪಾರ್ಕಿಂಗ್ ಮಾಡಿದ ವಿಚಾರವಾಗಿ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ವಿಕ್ರಮ್​ ರೈ ಕಣ್ಣಿನ ಮೇಲ್ಭಾಗಕ್ಕೆ ಗಾಯವಾಗಿದೆ.

ಹೈಗ್ರೌಂಡ್ಸ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆಸಿದ್ದಾರೆ. ಅಲ್ಲದೆ ಈ ಬಗ್ಗೆ ವಿಕ್ರಮ್​ ರೈ ದೂರು ಕೊಟ್ಟರೆ ಸ್ವೀಕರಿಸುವುದಾಗಿ ಪೊಲೀಸರು ಹೇಳಿಕಳುಹಿಸಿದ್ದಾರೆ. ಈ ಮಧ್ಯೆ ಎರಡೂ ಕಡೆಯವರಿಂದ ರಾಜಿ ಪ್ರಯತ್ನವೂ ನಡೆಯುತ್ತಿದೆ ಎನ್ನಲಾಗಿದೆ.